
2026ರ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಕೇವಲ 48 ಎಸೆತಗಳನ್ನು ಎದುರಿಸಿದ ಪಾಟಿದಾರ್ ಅಜೇಯ 135 ರನ್ ಬಾರಿಸಿದರು. ಪಾಟಿದರ್ ಅವರ ಈ ಶತಕದ ನೆರವಿನಿಂದ ಮಧ್ಯಪ್ರದೇಶ ತಂಡ, ಅಸ್ಸಾಂ ತಂಡವನ್ನು 131 ರನ್‌ಗಳಿಂದ ಮಣಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 250 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದ ಪರ ನಾಯಕ ಪಾಟಿದಾರ್ ಶತಕದ ಇನ್ನಿಂಗ್ಸ್ ಆಡಿದರು. ಇದು ಪಾಟಿದರ್ ಅವರ ಟಿ20 ವೃತ್ತಿಜೀವನದ ಎರಡನೇ ಶತಕವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು, 29 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮಧ್ಯಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ 7.4 ಓವರ್‌ಗಳಲ್ಲಿ 57 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ನಾಯಕ ರಜತ್ ಪಾಟಿದಾರ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅಸ್ಸಾಂ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅವರು ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದರು. ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ ಪಾಟಿದಾರ್, ಕೊನೆಯವರೆಗೂ ಅಜೇಯರಾಗಿ ಉಳಿದು 48 ಎಸೆತಗಳಲ್ಲಿ 135 ರನ್ ಚಚ್ಚಿದರು.
ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 13 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ 110 ರನ್ ಗಳಿಸಿ ಅಬ್ಬರಿಸಿದರು. ಮತ್ತೊಂದೆಡೆ ಶಿವಾಂಗ್ ಕುಮಾರ್ ಕೂಡ 61 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಇವರಿಬ್ಬರ ಆಟದ ನೆರವಿನಿಂದ ಮಧ್ಯಪ್ರದೇಶ ತಂಡ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಒಂದೇ ವರ್ಷದಲ್ಲಿ 400 ಸಿಕ್ಸರ್; ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ವಿಶ್ವದಾಖಲೆ
ಈ ಪಂದ್ಯಕ್ಕೂ ಮುನ್ನ ರಜತ್ ಪಾಟಿದಾರ್ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಗಾಗಿ ಪ್ರಕಟಿಸಿದ್ದ ಭಾರತ ಎ ತಂಡದಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ನವೆಂಬರ್ 19ರಿಂದ ದೋಹಾದಲ್ಲಿ ಆರಂಭವಾಗಲಿರುವ ಈ ಟೂರ್ನಿಗೆ ಆಯ್ಕೆಯಾಗಿದ್ದರೂ, ಗಾಯದ ನಿರ್ವಹಣೆಯ ಕಾರಣದಿಂದ 50 ಓವರ್‌ಗಳ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದರು. ಆದರೆ ಟಿ20 ಕ್ರಿಕೆಟ್‌ಗೆ ಮರಳಿರುವ ಪಾಟಿದಾರ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಸ್ಸಾಂ ವಿರುದ್ಧದ ಈ ಅಮೋಘ ಇನ್ನಿಂಗ್ಸ್ ಮೂಲಕ ತಮ್ಮ ಸ್ಫೋಟಕ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.