Ranji Trophy 2024: ಐಪಿಎಲ್‌ನಲ್ಲಿ ಅನ್​ಸೋಲ್ಡ್; ರಣಜಿಯಲ್ಲಿ 245 ರನ್ ಚಚ್ಚಿದ ಜಗದೀಸನ್

|

Updated on: Jan 21, 2024 | 6:14 PM

Ranji Trophy 2024: ಪ್ರಸಕ್ತ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡ ರೈಲ್ವೇಸ್ ವಿರುದ್ಧ ಪಂದ್ಯವನ್ನಾಡುತ್ತಿದೆ. ಈ ಪಂದ್ಯದಲ್ಲಿ ತಮಿಳುನಾಡು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಜಗದೀಸನ್ ಪ್ರಬಲ ದ್ವಿಶತಕ ಸಿಡಿಸಿದ್ದಾರೆ. ಇದು ಅವರ ಪ್ರಥಮ ದರ್ಜೆಯ ಮೊದಲ ದ್ವಿಶತಕವಾಗಿದೆ.

Ranji Trophy 2024: ಐಪಿಎಲ್‌ನಲ್ಲಿ ಅನ್​ಸೋಲ್ಡ್; ರಣಜಿಯಲ್ಲಿ 245 ರನ್ ಚಚ್ಚಿದ ಜಗದೀಸನ್
ನಾರಾಯಣ್ ಜಗದೀಸನ್
Follow us on

ಐಪಿಎಲ್‌ನ (IPL 2024) ಹೊಸ ಸೀಸನ್ ಆರಂಭವಾಗಲೂ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇತ್ತೀಚೆಗಷ್ಟೇ 2024 ರ ಐಪಿಎಲ್​ಗಾಗಿ ಮಿನಿ ಹರಾಜು ಕೂಡ ದುಬೈನಲ್ಲಿ ನಡೆದಿತ್ತು. ಈ ಹರಾಜಿನಲ್ಲಿ ಅನೇಕ ಆಟಗಾರರು ಭಾರಿ ಬೆಲೆಗೆ ಮಾರಾಟವಾದರೆ, ಇನ್ನು ಕೆಲವು ಪ್ರತಿಭಾವಂತ ಕ್ರಿಕೆಟಿಗರು ಖರೀದಿದಾರರನ್ನು ಹುಡುಕುವಲ್ಲಿ ವಿಫಲರಾದರು. ಅಂತಹವರಲ್ಲಿ ತಮಿಳುನಾಡಿನ ಪ್ರತಿಭಾವಂತ ಆಟಗಾರ ನಾರಾಯಣ್ ಜಗದೀಸನ್ (Narayan Jagadeesan) ಕೂಡ ಒಬ್ಬರು. ವಾಸ್ತವವಾಗಿ ಜಗದೀಸನ್​ರನ್ನು ಕಳೆದ ಐಪಿಎಲ್​ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಅವರಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಬಳಿಕ ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ನಂತರ ಈ ಬಾರಿಯ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದ ಜಗದೀಸನ್​ರನ್ನು ಯಾರು ಖರೀದಿಸಿರಲಿಲ್ಲ. ಆ ನೋವಿನ ನಡುವೆ ರಣಜಿಯಲ್ಲಿ (Ranji Trophy 2024) ತಮಿಳುನಾಡು ಪರ ಆಡುತ್ತಿರುವ ಜಗದೀಸನ್ ದ್ವಿಶತಕ ಸಿಡಿಸಿ ಎಲ್ಲರಿಗು ತಿರುಗೇಟು ನೀಡಿದ್ದಾರೆ.

29 ಬೌಂಡರಿ ಸಿಡಿಸಿದ ಜಗದೀಸನ್

ಪ್ರಸಕ್ತ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡ ರೈಲ್ವೇಸ್ ವಿರುದ್ಧ ಪಂದ್ಯವನ್ನಾಡುತ್ತಿದೆ. ಈ ಪಂದ್ಯದಲ್ಲಿ ತಮಿಳುನಾಡು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಜಗದೀಸನ್ ಪ್ರಬಲ ದ್ವಿಶತಕ ಸಿಡಿಸಿದ್ದಾರೆ. ಇದು ಅವರ ಪ್ರಥಮ ದರ್ಜೆಯ ಮೊದಲ ದ್ವಿಶತಕವಾಗಿದೆ. ಜಗದೀಸನ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 402 ಎಸೆತಗಳನ್ನು ಎದುರಿಸಿ 60.95 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 245 ರನ್ ಗಳಿಸಿದರು. ರೈಲ್ವೇ ತಂಡದ ಯಾವುದೇ ಬೌಲರ್​ಗೆ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಜಗದೀಶನ್ ತಮ್ಮ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡಂತೆ ಒಟ್ಟು 29 ಬೌಂಡರಿಗಳನ್ನು ಬಾರಿಸಿದರು.

ಜಗದೀಸನ್ ಅವರ ದ್ವಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ತಮಿಳುನಾಡು ತಂಡ 489 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ರೈಲ್ವೇ ತಂಡ 246 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಆ ಬಳಿಕ ಫಾಲೋ ಆನ್ ಪಡೆದ ರೈಲ್ವೇ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 114 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 129 ರನ್​ಗಳ ಹೀನಾಯ ಸೋಲು ಅನುಭವಿಸಿತು.

ಜಗದೀಸನ್ ಐಪಿಎಲ್ ವೃತ್ತಿಜೀವನ

2018 ರಲ್ಲಿ ಐಪಿಎಲ್​ ಅಖಾಡಕ್ಕೆ ಕಾಲಿಟ್ಟ ಜಗದೀಸನ್​ರನ್ನು ಸಿಎಸ್​ಕೆ ಖರೀದಿಸಿತ್ತು. 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಜಗದೀಸನ್ ಆ ಸೀಸನ್​ನಲ್ಲಿ ಒಟ್ಟು 5 ಪಂದ್ಯಗಳನ್ನು ಆಡಿದ್ದರು. ಇದಾದ ನಂತರ 2022ರ ಐಪಿಎಲ್​ನಲ್ಲಿ 2 ಪಂದ್ಯಗಳಲ್ಲಿ ಮಾತ್ರ ಅವರಿಗೆ ಅವಕಾಶ ಸಿಕ್ಕಿತ್ತು. 2023 ರ ಐಪಿಎಲ್​ಗೂ ಮುನ್ನ ಸಿಎಸ್​ಕೆ ತಂಡದಿಂದ ಹೊರಬಿದ್ದ ಜಗದೀಸನ್​ರನ್ನು ಕೆಕೆಆರ್ ಖರೀದಿಸಿತ್ತು. 2023 ರ ಐಪಿಎಲ್​ನಲ್ಲಿ ಕೆಕೆಆರ್ ಪರ 6 ಪಂದ್ಯಗಳನ್ನು ಆಡುವ ಅವಕಾಶ ಜಗದೀಸನ್​ಗೆ ಲಭಿಸಿತ್ತು. ಒಟ್ಟಾರೆಯಾಗಿ, ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ಜಗದೀಸನ್ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು ಕೇವಲ 162 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ