
ರಣಜಿ ಟೂರ್ನಿಯು ಮುಕ್ತಾಯದ ಹಂತಕ್ಕೆ ತಲುಪಿದೆ. ನಾಕೌಟ್ ಸುತ್ತಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮೂರು ತಂಡಗಳು ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ. ಎರಡನೇ ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡು ತಂಡವನ್ನು ಮಣಿಸಿ ವಿದರ್ಭ ತಂಡದ ಸೆಮಿಫೈನಲ್ ಹಂತಕ್ಕೇರಿದರೆ, ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಹರ್ಯಾಣ ವಿರುದ್ಧ ಮುಂಬೈ ಜಯ ಸಾಧಿಸಿದೆ. ಇನ್ನು ಕ್ವಾರ್ಟರ್ ಫೈನಲ್ನಲ್ಲಿ ಸೌರಾಷ್ಟ್ರ ವಿರುದ್ಧ ಗುಜರಾತ್ ತಂಡವು ಜಯಭೇರಿ ಬಾರಿಸಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್ನಲ್ಲಿ ನಡೆದ ಎರಡನೇ ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡು ತಂಡವನ್ನು 198 ರನ್ಗಳಿಂದ ಮಣಿಸಿ ವಿದರ್ಭ ಮುಂದಿನ ಹಂತಕ್ಕೇರಿದೆ. ಈ ಪಂದ್ಯದಲ್ಲಿ 122 ರನ್ಗಳ ಭರ್ಜರಿ ಶತಕ ಸಿಡಿಸಿದ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡವನ್ನು ಮುಂಬೈ 152 ರನ್ಗಳಿಂದ ಮಣಿಸಿದೆ. ಈ ಮ್ಯಾಚ್ನಲ್ಲಿ ಒಟ್ಟು 9 ವಿಕೆಟ್ ಕಬಳಿಸಿ ಮಿಂಚಿದ್ದ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ಜರುಗಿದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಗುಜರಾತ್ ಇನಿಂಗ್ಸ್ ಹಾಗೂ 98 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮ್ಯಾಚ್ನಲ್ಲಿ ಶತಕ ಸಿಡಿಸಿದ ಜಯಮೀತ್ ಪಟೇಲ್ (103) ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಕೇರಳ ಮತ್ತು ಜಮ್ಮು ಕಾಶ್ಮೀರ ನಡುವೆ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮುಂದುವರೆದಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸಲು ಕೇರಳ ತಂಡಕ್ಕೆ ಇನ್ನೂ 299 ರನ್ಗಳ ಅವಶ್ಯಕತೆಯಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನಾಲ್ಕನೇ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ.