
ರಣಜಿ ಟ್ರೋಫಿ 2026-27 ರ ಗುಂಪು ಹಂತದ ಪಂದ್ಯದಲ್ಲಿ ಗುಜರಾತ್ ಹಾಗೂ ದೆಹಲಿ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದೆಹಲಿ ತಂಡ, ಮೊದಲ ದಿನದ ಆಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 381 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ತಂಡದ ಪರ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 199 ರನ್ ಬಾರಿಸಿದರಾದರೂ ಕೇವಲ ಒಂದು ರನ್ನಿಂದ ದ್ವಿಶತಕ ವಂಚಿತರಾದರು. ಆದಾಗ್ಯೂ ಅವರು ನಾಯಕ ಆಯುಷ್ ಬದೋನಿ ಅವರೊಂದಿಗೆ ದ್ವಿಶತಕದ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ದೆಹಲಿ ಪರ ಆರಂಭಿಕನಾಗಿ ಕಣಕ್ಕಿಳಿದ ಪ್ರಿಯಾಂಶ್ ತಮ್ಮ ಮೂರನೇ ಪ್ರಥಮ ದರ್ಜೆ ಪಂದ್ಯದಲ್ಲಿ ಅದರಲ್ಲೂ ಈ ಸ್ವರೂಪದಲ್ಲಿ ತಮ್ಮ ಮೊದಲ ಶತಕ ಬಾರಿಸಿದರು. ಆ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ಪ್ರಿಯಾಂಶ್ ದ್ವಿಶತಕದತ್ತ ದಾಪುಗಾಲಿಟ್ಟರು. ಆದರೆ ದ್ವಿಶತಕಕ್ಕೆ ಒಂದು ರನ್ ಬೇಕಾಗಿದ್ದಾಗ ವಿಕೆಟ್ ಒಪ್ಪಿಸಿ ದ್ವಿಶತಕ ವಂಚಿತರಾದರು. ಆದಾಗ್ಯೂ ಪ್ರಿಯಾಂಶ್ ಗುಜರಾತ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ 220 ಎಸೆತಗಳಲ್ಲಿ 199 ರನ್ ಗಳಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 24 ಬೌಂಡರಿ ಹಾಗೂ ಆರು ಸಿಕ್ಸರ್ಗಳು ಸೇರಿದ್ದವು.
ಪ್ರಿಯಾಂಶ್ ಈ ಪಂದ್ಯದಲ್ಲಿ ದ್ವಿಶತಕ ಪೂರೈಸದಿದ್ದರೂ, ನಾಯಕ ಆಯುಷ್ ಬದೋನಿ ಅವರೊಂದಿಗೆ 234 ರನ್ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಇತ್ತ ಬದೋನಿ ಕೂಡ 149 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಸಹಿತ 115 ರನ್ ಬಾರಿಸಿದರು. ಈ ಇಬ್ಬರು ಬ್ಯಾಟರ್ಗಳ ಶತಕದಾಟದಿಂದ ದೆಹಲಿ ತಂಡ ಮೊದಲ ದಿನದಾಟದಂತ್ಯಕ್ಕೆ ಉತ್ತಮ ಸ್ಥಿತಿಗೆ ತಲುಪಿದೆ.
9ನೇ ಕ್ರಮಾಂಕದಲ್ಲಿ ಬಂದು ಕರ್ನಾಟಕ ತಂಡದ ಮಾನ ಉಳಿಸಿದ ಮನ್ವಂತ್ ಕುಮಾರ್
ಮೊದಲ ದಿನದ ಆಟ ಮುಕ್ತಾಯಗೊಂಡಾಗ ದೆಹಲಿ ತಂಡ 84 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 381 ರನ್ ಗಳಿಸಿದೆ. ತಂಡದ ಪರ ಯಶ್ ಧುಲ್ 10 ರನ್, ಸನತ್ ಸಾಂಗ್ವಾನ್ ಎಂಟು ರನ್ ಹಾಗೂ ಆಯುಷ್ ಸುಮಿತ್ ದೋಸೇಜಾ 29 ರನ್ ಗಳಿಸಿ ಔಟಾದರು. ನಾಯಕ ಆಯುಷ್ ಬದೋನಿ 115 ರನ್ಗಳೊಂದಿಗೆ ಮತ್ತು ಸುಮಿತ್ ಮಥುರ್ ಖಾತೆ ತೆರೆಯದೆ ಕ್ರೀಸ್ನಲ್ಲಿದ್ದಾರೆ. ಇತ್ತ ಗುಜರಾತ್ ಪರ ಹರ್ಷಲ್ ಪಟೇಲ್ ಮೂರು ವಿಕೆಟ್ಗಳನ್ನು ಪಡೆದರಾದರೂ, ದೆಹಲಿಯ ಬ್ಯಾಟರ್ಗಳ ಬಲಿಷ್ಠ ಪ್ರದರ್ಶನಕ್ಕೆ ಕಡಿವಾಣ ಹಾಕಲು ಗುಜರಾತ್ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ.
Published On - 7:36 pm, Sun, 18 October 26