ರಣಜಿ ಟ್ರೋಫಿಯ ಆರನೇ ಸುತ್ತಿನಲ್ಲಿ ಕರ್ನಾಟಕ ಮತ್ತು ಪಂಜಾಬ್ ನಡುವೆ ಪಂದ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ ಸ್ಮರಣ್ ರವಿಚಂದ್ರನ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ವಿರುದ್ಧ ದಾಖಲೆಯ ದ್ವಿಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 277 ಎಸೆತಗಳನ್ನು ಎದುರಿಸಿದ ಸ್ಮರಣ್ 203 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 475 ರನ್ ಗಳಿಸಿದೆ. ಇದುವರೆಗೆ 6 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸ್ಮರಣ್ಗೆ ಇದು ಮೊದಲ ಶತಕ ಮತ್ತು ದ್ವಿಶತಕವಾಗಿದೆ.
21 ವರ್ಷದ ಸ್ಮರಣ್ ರವಿಚಂದ್ರನ್ ಕಳೆದ ವರ್ಷ ಅಂದರೆ 2024ರಲ್ಲಿ ದೇಶಿ ಕ್ರಿಕೆಟ್‌ಗೆ ಕಾಲಿಟ್ಟರು. ಹೆಚ್ಚು ಪಂದ್ಯವನ್ನಾಡದ ಅನುಭವವಿಲ್ಲದ ಸ್ಮರಣ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತ್ರಿಪುರಾ ವಿರುದ್ಧ ಟಿ20 ಕ್ರಿಕೆಟ್‌ಗೆ ಮತ್ತು ಮುಂಬೈ ವಿರುದ್ಧದ ಲಿಸ್ಟ್ ಎ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇನ್ನು ಮಧ್ಯಪ್ರದೇಶ ವಿರುದ್ಧ ಚೊಚ್ಚಲ ರಣಜಿ ಟ್ರೋಫಿ ಪಂದ್ಯವನ್ನಾಡಿದ ಸ್ಮರಣ್ ದೇಶೀಯ ಕ್ರಿಕೆಟ್‌ನಲ್ಲಿ ಕೇವಲ 6 ತಿಂಗಳಲ್ಲೇ ಕರ್ನಾಟಕ ತಂಡಕ್ಕಾಗಿ ದೊಡ್ಡ ಇನ್ನಿಂಗ್ಸ್ ಆಡಿದ್ದಾರೆ.
ಜನವರಿ 23ರಿಂದ ಆರಂಭವಾದ ಈ ಪಂದ್ಯದಲ್ಲಿ ಪಂಜಾಬ್ ತಂಡವನ್ನು 55 ರನ್‌ಗಳಿಗೆ ಕಟ್ಟಿಹಾಕಿದ ಕರ್ನಾಟಕ ತಂಡ ಬ್ಯಾಟಿಂಗ್‌ಗೆ ಇಳಿದಿತ್ತು. ಅಲ್ಲದೆ 59 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ನಂತರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸ್ಮರಣ್, ದೇವದತ್ ಪಡಿಕ್ಕಲ್ ಅವರೊಂದಿಗೆ 52 ರನ್‌ಗಳ ಜೊತೆಯಾಟವನ್ನು ಮಾಡಿದರು.
ಇದಾದ ನಂತರ ಬಂದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಸ್ಮರಣ್ ಸಣ್ಣ ಜೊತೆಯಾಟಗಳ ಮೂಲಕ ತಂಡದ ಸ್ಕೋರ್ ಹೆಚ್ಚಿಸುತ್ತಲೇ ದ್ವಿಶತಕ ಗಳಿಸಿದರು. ಅವರ 203 ರನ್‌ಗಳ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 475 ರನ್ ಗಳಿಸಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 420 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಸ್ಮರಣ್ ರವಿಚಂದ್ರನ್ ಈ ಹಿಂದೆಯೂ ಕರ್ನಾಟಕ ತಂಡದ ಪರ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಅವರು ಭಾರತದ ದೇಶೀಯ ಏಕದಿನ ಪಂದ್ಯಾವಳಿಯ ವಿಜಯ್ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿ ಶತಕ ಬಾರಿಸುವ ಮೂಲಕ ತಮ್ಮ ತಂಡವನ್ನು ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ವಿದರ್ಭ ವಿರುದ್ಧದ ಈ ಪಂದ್ಯದಲ್ಲಿ ಅವರು 92 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕ ತಂಡ 348 ರನ್‌ಗಳ ಬೃಹತ್ ಸ್ಕೋರ್ ಗಳಿಸಲು ಶಕ್ತವಾಯಿತು. ಇದಲ್ಲದೆ ಇಡೀ ಪಂದ್ಯಾವಳಿಯಲ್ಲಿ 10 ಪಂದ್ಯಗಳನ್ನು ಆಡಿದ ಸ್ಮರಣ್, 72 ರ ಸರಾಸರಿಯಲ್ಲಿ 443 ರನ್ ಕಲೆಹಾಕಿದ್ದರು. ಇದರಲ್ಲಿ 2 ಶತಕ ಮತ್ತು 2 ಅರ್ಧ ಶತಕಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ