9ನೇ ಕ್ರಮಾಂಕದಲ್ಲಿ ಬಂದು ಕರ್ನಾಟಕ ತಂಡದ ಮಾನ ಉಳಿಸಿದ ಮನ್ವಂತ್ ಕುಮಾರ್

2026-27 ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್‌ಗೆ 281 ರನ್ ಗಳಿಸಿದೆ. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ, 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನ್ವಂತ್ ಕುಮಾರ್ 124 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಸೌರಾಷ್ಟ್ರ ಪರ ಜಯದೇವ್ ಉನದ್ಕಟ್ 3 ವಿಕೆಟ್ ಪಡೆದರು. ಕರ್ನಾಟಕಕ್ಕೆ ಉತ್ತಮ ಆರಂಭ ಸಿಗದಿದ್ದರೂ, ಮಯಾಂಕ್, ಕರುಣ್ ಮತ್ತು ಅನೀಶ್ ಸಹ ಕೊಡುಗೆ ನೀಡಿದರು.

9ನೇ ಕ್ರಮಾಂಕದಲ್ಲಿ ಬಂದು ಕರ್ನಾಟಕ ತಂಡದ ಮಾನ ಉಳಿಸಿದ ಮನ್ವಂತ್ ಕುಮಾರ್
ಮನ್ವಂತ್ ಕುಮಾರ್

Updated on: Oct 18, 2026 | 6:18 PM

2026-27ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕಟ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 86 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 281 ರನ್ ಕಲೆಹಾಕಿದೆ. ಆರಂಭಿಕ ಆಘಾತದಿಂದ ಕಂಗೆಟ್ಟ ಕರ್ನಾಟಕ ತಂಡಕ್ಕೆ ಒಂಬತ್ತನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನ್ವಂತ್ ಕುಮಾರ್ ಅಮೋಘ ಬ್ಯಾಟಿಂಗ್ ಮೂಲಕ ಆಸರೆಯಾಗಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಆಟವಾಡಿದ ಮನ್ವಂತ್ ಕುಮಾರ್ 124 ಎಸೆತಗಳಲ್ಲಿ 86 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಸೇರಿವೆ. ಮತ್ತೊಂದು ತುದಿಯಲ್ಲಿ ಅಭಿಲಾಷ್ ಶೆಟ್ಟಿ 6 ರನ್ ಗಳಿಸಿ ಅಜೇಯರಾಗಿದ್ದಾರೆ.

ಕೈಕೊಟ್ಟ ಮಧ್ಯಮ ಕ್ರಮಾಂಕ

ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 12 ರನ್​ಗಳಿಗೆ ತಂಡದ ಮೊದಲ ವಿಕೆಟ್ ರೋಹಿತ್ ಪಾಟೀಲ್ ರೂಪದಲ್ಲಿ ಪತನವಾಯಿತು. ವೇಗಿ ವೈಶಾಕ್ ವಿಜಯ್​ಕುಮಾರ್ 1 ರನ್​ಗಳಿಗೆ ಸುಸ್ತಾದರೆ, ಅನುಭವಿ ಬ್ಯಾಟರ್ ಮಯಾಂಕ್ ಅಗರ್ವಾಲ್ 42 ರನ್​ಗಳ ಇನ್ನಿಂಗ್ಸ್ ಆಡಿದರು. ಮತ್ತೊಬ್ಬ ಅನುಭವಿ ಕರುಣ್ ನಾಯರ್ 46 ರನ್ ಬಾರಿಸಿದರೆ, ಕೆ.ವಿ. ಅನೀಶ್ 59 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅನೀಶ್ವರ್ ಗೌತಮ್ 1 ರನ್ ಹಾಗೂ ಕೆ. ಶ್ರೀಜಿತ್ 21 ರನ್ ಹಾಗೂ ನಾಯಕ ಶ್ರೇಯಸ್ ಗೋಪಾಲ್ ಕೇವಲ 3 ರನ್ ಬಾರಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ತಂಡ ಒತ್ತಡಕ್ಕೆ ಸಿಲುಕಿತು.

Loading...

Ranji Trophy Final: ಕರ್ನಾಟಕವನ್ನು ಮಣಿಸಿ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ

9ನೇ ವಿಕೆಟ್​ಗೆ ಅಜೇಯ 87 ರನ್​

ಆದರೆ, ಸೌರಾಷ್ಟ್ರದ ಬೌಲರ್‌ಗಳ ಸಂಘಟಿತ ದಾಳಿಗೆ ಕರ್ನಾಟಕದ ಪ್ರಮುಖ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ತಂಡ 200 ರನ್ ದಾಟುವ ಮುನ್ನವೇ ಪ್ರಮುಖ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಇಲ್ಲಿಂದ ಜೊತೆಯಾದ ಮನ್ವಂತ್ ಕುಮಾರ್ ಹಾಗೂ ಅಭಿಲಾಷ್ ಶೆಟ್ಟಿ 9ನೇ ವಿಕೆಟ್​ಗೆ ಅಜೇಯ 87 ರನ್​ಗಳ ಜೊತೆಯಾಟ ನಡೆಸಿದ್ದಾರೆ. ಇತ್ತ ಸೌರಾಷ್ಟ್ರ ಪರ ನಾಯಕ ಜಯದೇವ್ ಉನದ್ಕಟ್ ಅತ್ಯಧಿಕ 3 ವಿಕೆಟ್‌ಗಳನ್ನು ಕಬಳಿಸಿದರೆ, ಚೇತನ್ ಸಕಾರಿಯಾ ಹಾಗೂ ಪಾರ್ಥ್ ಭುಟ್ ಕೂಡ ಕರ್ನಾಟಕದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us