ಸೂರ್ಯನಿಗೆ ಕೊನೆ ಅವಕಾಶವೂ ಸಿಗಲಿಲ್ಲ; ವೃತ್ತಿಜೀವನ ಭಾಗಶಃ ಅಂತ್ಯ..!

2026-27ರ ರಣಜಿ ಟ್ರೋಫಿಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ಸಿದ್ಧೇಶ್ ಲಾಡ್ ನಾಯಕರಾಗಿದ್ದಾರೆ. ಆದರೆ, ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಯುವ ಆಟಗಾರರಿಗೆ ಅವಕಾಶ ನೀಡಲು ಸೂರ್ಯಕುಮಾರ್ ಅವರನ್ನು ಭವಿಷ್ಯದ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿದೆ. ಇದರಿಂದ ತಮ್ಮ ಫಾರ್ಮ್ ಮರಳಿ ಪಡೆಯುವ ಸೂರ್ಯಕುಮಾರ್ ಅವರ ಆಸೆಗೆ ಹಿನ್ನಡೆಯಾಗಿದೆ.

ಸೂರ್ಯನಿಗೆ ಕೊನೆ ಅವಕಾಶವೂ ಸಿಗಲಿಲ್ಲ; ವೃತ್ತಿಜೀವನ ಭಾಗಶಃ ಅಂತ್ಯ..!
ಸೂರ್ಯಕುಮಾರ್ ಯಾದವ್

Updated on: Oct 05, 2026 | 10:24 PM

2026-27ರ ಆವೃತ್ತಿಯ ರಣಜಿ ಟ್ರೋಫಿ ಇದೇ ಅಕ್ಟೋಬರ್ 11 ರಿಂದ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯಾವಳಿಗೆ ತಂಡಗಳನ್ನು ಘೋಷಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅದರಂತೆ ರಣಜಿ ದೈತ್ಯ ಮುಂಬೈ ರಣಜಿ ಟ್ರೋಫಿ ತಂಡವನ್ನು ಇದೀಗ ಪ್ರಕಟಿಸಲಾಗಿದೆ. ಈ ತಂಡವನ್ನು ಸಿದ್ಧೇಶ್ ಲಾಡ್ ಮುನ್ನಡೆಸಲಿದ್ದು, 19 ವರ್ಷದೊಳಗಿನವರ ಟಿ20 ವಿಶ್ವಕಪ್ ಗೆದ್ದ ನಾಯಕ ಆಯುಷ್ ಮ್ಹಾತ್ರೆ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಆದಾಗ್ಯೂ ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್​ ಅವರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡದಿರುವುದು ಅವರ ವೃತ್ತಿಜೀವನ ಭಾಗಶಃ ಅಂತ್ಯವಾಗಿರುವುದನ್ನು ಸ್ಪಷ್ಟಪಡಿಸಿದೆ.

ಸೂರ್ಯಕುಮಾರ್ ಕನಸು ಭಗ್ನ

ವಾಸ್ತವವಾಗಿ ಭಾರತ ಟಿ20 ತಂಡದ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ ತಂಡದಿಂದಲೂ ಹೊರಬಿದ್ದಿರುವ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ತಮ್ಮ ಕಳೆದುಹೋದ ಫಾರ್ಮ್ ಅನ್ನು ಮರಳಿ ಪಡೆಯಲು 2026-27ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡಲು ಮುಂದಾಗಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಸ್ವತಃ ಸೂರ್ಯಕುಮಾರ್ ಅವರೇ ತಾನು ರಣಜಿ ಪಂದ್ಯವನ್ನಾಡಲು ಸಿದ್ಧನಿದ್ದೇನೆ ಎಂಬುದನ್ನು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್​ ಬಳಿ ಹೇಳಿದ್ದಾರೆ ಎಂತಲೂ ಹೇಳಲಾಗಿತ್ತು. ಆದರೆ ಈಗ ಪ್ರಕಟಗೊಂಡಿರುವ ರಣಜಿ ತಂಡದಲ್ಲಿ ಸೂರ್ಯನಿಗೆ ಅವಕಾಶ ನೀಡಿಲ್ಲ. ಹೀಗಾಗಿ ರಣಜಿಯಲ್ಲಿ ಮಿಂಚಿ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ಇರಾದೆಯಲ್ಲಿದ್ದ ಸೂರ್ಯಕುಮಾರ್​ಗೆ ನಿರಾಶೆ ಎದುರಾಗಿದೆ.

ಸೂರ್ಯನಿಗೆ ಅವಕಾಶ ನೀಡದಿರಲು ಕಾರಣವೇನು?

ಸೂರ್ಯಕುಮಾರ್ ಯಾದವ್ ಅವರನ್ನು ರಣಜಿ ಟ್ರೋಫಿಗೆ ತಂಡದಲ್ಲಿ ಆಯ್ಕೆ ಮಾಡದಿರುವ ಬಗ್ಗೆ ಮುಂಬೈನ ಮುಖ್ಯ ಆಯ್ಕೆದಾರರು ಹೇಳಿಕೆ ನೀಡಿದ್ದು, ‘ನಾವು ಯುವ ಆಟಗಾರರಿಗೆ ಅವಕಾಶ ನೀಡಲು ಬಯಸಿದ್ದೇವೆ. ಹೀಗಾಗಿ ನಮ್ಮ ಭವಿಷ್ಯದ ಯೋಜನೆಗಳಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಂಡಿಲ್ಲ’ ಎಂದಿದ್ದಾರೆ.

ಉಳಿದಂತೆ ಮುಂಬೈ ರಣಜಿ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಅವರಂತಹ ಪ್ರತಿಭಾವಂತ ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್

2026-27ರ ರಣಜಿ ಟ್ರೋಫಿಗಾಗಿ ಮುಂಬೈ ತಂಡ

ಸಿದ್ಧೇಶ್ ಲಾಡ್ (ನಾಯಕ), ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ (ಉಪನಾಯಕ), ದಿವ್ಯಾಂಶ್ ಸಕ್ಸೇನಾ, ಮುಶೀರ್ ಖಾನ್, ಸರ್ಫರಾಜ್ ಖಾನ್, ಸುವೇದ್ ಪರ್ಕರ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಥರ್ವ ಅಂಕೋಲೆಕರ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಸಿಲ್ವೆಸ್ಟರ್ ಡಿಸೋಜಾ, ಓಂಕಾರ್ ತರ್ಮಲೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us