ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್
Suryakumar Yadav: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ 2026ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿತು. ಸೂರ್ಯಕುಮಾರ್ ನಾಯಕನಾಗಿ ಯಶಸ್ವಿಯಾದರೂ, ಆಟಗಾರನಾಗಿ ಏರಿಳಿತಗಳನ್ನು ಕಂಡರು. ಪಂದ್ಯಾವಳಿ ಮುಗಿದ ನಂತರ ನಿವೃತ್ತಿ ವದಂತಿಗಳು ಹರಡಿದ್ದವು. ಆದರೆ, ಸೂರ್ಯಕುಮಾರ್ ಈ ಊಹಾಪೋಹಗಳಿಗೆ ತೆರೆ ಎಳೆದು, 'ಇನ್ನೂ ಸಾಕಷ್ಟು ಕ್ರಿಕೆಟ್ ನನ್ನಲ್ಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ. ಫೈನಲ್‌ನಲ್ಲಿ ಶೂನ್ಯಕ್ಕೆ ಔಟಾದರೂ, ಒಟ್ಟು 242 ರನ್ ಗಳಿಸಿ ಮಿಂಚಿದರು.

2024 ರ ಟಿ20 ವಿಶ್ವಕಪ್ (T20 World Cup) ಮುಗಿದ ಬಳಿಕ ಭಾರತ ಟಿ20 ತಂಡದ ನಾಯಕತ್ವವಹಿಸಿಕೊಂಡ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕನಾಗಿ ತಂಡವನ್ನು ದಾಖಲೆಯ ಗೆಲುವುಗಳತ್ತ ಮುನ್ನಡೆಸಿದ್ದಾರೆ. ಆದಾಗ್ಯೂ ಆಟಗಾರನಾಗಿ ಸೂರ್ಯಕುಮಾರ್ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸೂರ್ಯಕುಮಾರ್ ಬರೋಬ್ಬರಿ 1 ವರ್ಷದಿಂದ ರನ್ ಬರ ಎದುರಿಸಿದ್ದರು. ಆದರೆ ವಿಶ್ವಕಪ್ ಸಮೀಪವಾಗುತ್ತಿದ್ದಂತೆ ಫಾರ್ಮ್ ಕಂಡುಕೊಂಡಿದ್ದ ಸೂರ್ಯ, ಇದೀಗ ತಂಡವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸಿದ್ದಾರೆ.
ಸೂರ್ಯ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಆದಾಗ್ಯೂ, 35 ವರ್ಷದ ಸೂರ್ಯಕುಮಾರ್ ಯಾದವ್ ಪಂದ್ಯಾವಳಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಾರೆ ಎಂಬ ಊಹಾಪೋಹಗಳು ಪಂದ್ಯಾವಳಿಯ ಆರಂಭದಿಂದಲೂ ಕೇಳಿಬಂದಿದ್ದವು. ಇದೀಗ ಫೈನಲ್ ಮುಗಿದ ಬಳಿಕ ಮಾತನಾಡಿರುವ ಸೂರ್ಯ, ನಿವೃತ್ತಿಯ ಬಗ್ಗೆ ಹರಡಿರುವ ವದಂತಿಗಳಿಗೆ ತೆರೆ ಎಳಿದರು.
ನಿವೃತ್ತಿ ಬಗ್ಗೆ ಸೂರ್ಯ ಹೇಳಿದ್ದೇನು?
2026 ರ ಟಿ20 ವಿಶ್ವಕಪ್ ಫೈನಲ್ ಗೆದ್ದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯ ಕುರಿತ ಪ್ರಶ್ನೆಗಳಿಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಹಾಜರಿದ್ದ ಸೂರ್ಯ, ‘ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ನಿವೃತ್ತಿಯ ಬಗ್ಗೆ ಏಕೆ ಯೋಚಿಸಬೇಕು?. ಹೀಗಾಗಿ ನಾನು ನಿವೃತ್ತಿ ನಿರ್ಧಾರದ ಬಗ್ಗೆ ಯಾವ ಯೋಚನೆಯನ್ನು ಮಾಡಿಲ್ಲ. ಇನ್ನೂ ನನ್ನಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
IND vs NZ: ಸೊನ್ನೆ ಸುತ್ತಿದ ನಾಯಕ ಸೂರ್ಯ; 4ನೇ ಫೈನಲ್ನಲ್ಲೂ ಇತಿಹಾಸ ಬದಲಾಗಲಿಲ್ಲ
ಫೈನಲ್‌ನಲ್ಲಿ ಸೊನ್ನೆ ಸುತ್ತಿದ ಸೂರ್ಯ
ಭಾರತ ಚಾಂಪಿಯನ್ ಆದ ಹೊರತಾಗಿಯೂ ಫೈನಲ್ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ರನ್ ಗಳಿಸದೆ ಔಟಾದರು. ಆದಾಗ್ಯೂ ಪಂದ್ಯಾವಳಿಯಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಒಟ್ಟು 242 ರನ್ ಕಲೆಹಾಕಿರುವ ಸೂರ್ಯ 2026 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿನ ಅರ್ಧಶತಕವೂ ಸೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
