ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯದ ನಂತರ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ (Shreyas Iyer) ಇದೀಗ ದೇಶೀ ಸೀಸನ್ ಆಡುವ ಮನಸ್ಸಿಲ್ಲದೆ ಬಿಸಿಸಿಐಗೆ (BCCI) ಸುಳ್ಳು ಹೇಳಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ವಾಸ್ತವವಾಗಿ ಇಂಜುರಿ ಜೊತೆಗೆ ಕಳಪೆ ಫಾರ್ಮ್ನಿಂದಲೂ ಬಳಲುತ್ತಿದ್ದ ಅಯ್ಯರ್ ಅವರನ್ನು ತಂಡದಿಂದ ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೋರಾಗಿತ್ತು. ಆ ವೇಳೆ ಇಂಜುರಿಗೆ ತುತ್ತಾದ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪ್ರಸ್ತುತ ಇಂಜುರಿಯಿಂದ ಚೇತರಿಸಿಕೊಂಡಿರುವ ಶ್ರೇಯಸ್ರನ್ನು ದೇಶೀ ಟೂರ್ನಿ ರಣಜಿಯಲ್ಲಿ ಆಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ಆದರೆ ರಣಜಿ ಆಡಲು ಅದ್ಯಾಕೋ ಮನಸ್ಸು ಮಾಡದ ಅಯ್ಯರ್ ನನಗೆ ಬೆನ್ನು ನೋವಿದೆ ಎಂದು ಹೇಳಿ ರಣಜಿ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಅಯ್ಯರ್ ಅವರನ್ನು ಪರೀಕ್ಷಿಸಿರುವ ಎನ್ಸಿಎ ಅಧಿಕಾರಿಗಳು ಶಾಕಿಂಗ್ ವರದಿಯೊಂದನ್ನು ಬಹಿರಂಗಡಿಸಿದ್ದಾರೆ.
‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ಬೆನ್ನು ನೋವಿನಿಂದ ಬಳಲುತ್ತಿರುವ ನಾನು ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡುವುದಿಲ್ಲ ಎಂದು ಶ್ರೇಯಸ್ ಅಯ್ಯರ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದರು. ಇದಾದ ನಂತರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಶ್ರೇಯಸ್ ಅಯ್ಯರ್ ಅವರ ಇಂಜುರಿ ಬಗ್ಗೆ ಅಪ್ಡೇಟ್ ನೀಡಿದ್ದು, ಅದರಲ್ಲಿ ‘ಅಯ್ಯರ್ ಪೂರ್ಣ ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ ಎಂದು ಆಯ್ಕೆದಾರರಿಗೆ ಇಮೇಲ್ ಮೂಲಕ ದೃಢಪಡಿಸಿದ್ದಾರೆ.
ಅಲ್ಲದೆ ಅಯ್ಯರ್ ಟೀಂ ಇಂಡಿಯಾದಿಂದ ಹೊರಬಿದ್ದ ನಂತರ ಅವರು ಹೊಸದಾಗಿ ಯಾವುದೇ ಗಾಯಕ್ಕೆ ತುತ್ತಾಗಿಲ್ಲ ಎಂಬುದನ್ನು ವರದಿಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ, ಮುಂಬೈ ಶುಕ್ರವಾರ ರಣಜಿ ಟ್ರೋಫಿ 2024 ರ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಬರೋಡಾವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಅಯ್ಯರ್ ಮುಂಬೈ ಪರ ಆಡಲಿ ಎಂದು ಬಿಸಿಸಿಐ ತಿಳಿಸಿತ್ತು. ಆದರೆ ಅಯ್ಯರ್ ಗಾಯದ ನೆಪವೊಡ್ಡಿ ಇದೀಗ ರಣಜಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಸದ್ಯಕ್ಕೆ ವರದಿಯಾಗಿರುವುದನ್ನು ಗಮನಿಸಿದರೆ, ಶ್ರೇಯಸ್ ರಣಜಿ ಪಂದ್ಯದಲ್ಲಿ ಆಡುವುದನ್ನು ತಪ್ಪಿಸಲು ಮುಂಬೈ ತಂಡದ ಮ್ಯಾನೇಜ್‌ಮೆಂಟ್‌ಗೆ ಸುಳ್ಳು ಹೇಳಿದ್ದಾರೆಯೇ? ಅಥವಾ ತಾನು ಹೊಸ ಇಂಜುರಿಗೆ ತುತ್ತಾಗಿರುವುದನ್ನು ಅಯ್ಯರ್ ಎನ್ಸಿಎಗೆ ತಿಳಿಸಿಲ್ಲವೇ ಎಂಬುದು ಇನ್ನಷ್ಟೆ ಹೊರಬರಬೇಕಿದೆ. ಆದರೆ ಬಿಸಿಸಿಐನ ಕೇಂದ್ರ ಗುತ್ತಿಗೆಗೆ ಒಳಪಟ್ಟಿರುವ ಆಟಗಾರರು, ಬಿಸಿಸಿಐನ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಂತೆ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿರುವ ಅಯ್ಯರ್, ಸುಳ್ಳು ಹೇಳಿ ರಣಜಿ ಆಡದಿರುವುದು ಬಿಸಿಸಿಐ ಅನ್ನು ಕೋಪಗೊಳ್ಳುವಂತೆ ಮಾಡಿದೆ.
ಇದೆಲ್ಲದರ ನಡುವೆ ಕೆಲವು ಆಟಗಾರರು ದೇಶೀ ಕ್ರಿಕೆಟ್ ಬಿಟ್ಟು ಐಪಿಎಲ್ನತ್ತ ಗಮನಹರಿಸುತ್ತಿರುವುದನ್ನು ಮನಗಂಡಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಮಾನದಂಡವಾಗಿರುವ ದೇಶೀಯ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬರು ಆಡಬೇಕಾಗುತ್ತದೆ. ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುವ ಆಟಗಾರರ ಈ ಪ್ರವೃತ್ತಿ ಸರಿಯಲ್ಲ. ಹಾಗೆ ಮಾಡುವ ಆಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಯ್ ಶಾ ಅವರು ಕೇಂದ್ರ ಗುತ್ತಿಗೆ ಮತ್ತು ಭಾರತ ಎ ಆಟಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು.
ಇಂಗ್ಲೆಂಡ್ ವಿರುದ್ಧ ಆಡಿದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ವಿಶೇಷವೇನಾಗಿರಲಿಲ್ಲ. ಅಯ್ಯರ್ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 35, 13 ರನ್ ಮತ್ತು ಎರಡನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 27, 39 ರನ್ ಗಳಿಸಿದ್ದರು. ಇದೀಗ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ