
ಪ್ರಸ್ತುತ ನಡೆಯುತ್ತಿರುವ ದೇಶೀ ಟೂರ್ನಿ ರಣಜಿ ಟ್ರೋಫಿ ಗ್ರೂಪ್ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ ಎಲ್ಲರ ಗಮನ ದೆಹಲಿ ಮತ್ತು ರೈಲ್ವೇಸ್ ತಂಡಗಳ ಮುಖಾಮುಖಿಯ ಮೇಲಿತ್ತು. ಇದಕ್ಕೆ ಕಾರಣ 12 ವರ್ಷಗಳ ನಂತರ ಈ ಟೂರ್ನಿಯಲ್ಲಿ ಆಡಿದ ವಿರಾಟ್ ಕೊಹ್ಲಿ. ಆದರೆ ಇದೀಗ ಮತ್ತೊಂದು ಪಂದ್ಯ ಎಲ್ಲರ ಗಮನ ಸೆಳೆದಿದ್ದು ಇದಕ್ಕೆ ಕಾರಣ ಯಾವುದೇ ಸೂಪರ್ ಸ್ಟಾರ್ ಅಲ್ಲ. ಬದಲಿಗೆ ಪಿಚ್ ಟ್ಯಾಂಪರಿಂಗ್ನಂತಹ ಗಂಭೀರ ಆರೋಪ. ಜಮ್ಮು ಮತ್ತು ಕಾಶ್ಮೀರ ಮತ್ತು ಬರೋಡಾ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಈ ವಿವಾದವು ಬೆಳಕಿಗೆ ಬಂದಿದ್ದು, ಜಮ್ಮು ಮತ್ತು ಕಾಶ್ಮೀರ ತಂಡವು ಬರೋಡಾ ತಂಡದ ವಿರುದ್ಧ ಪಿಚ್ ಟ್ಯಾಂಪರ್ ಆರೋಪವನ್ನು ಮಾಡಿದೆ. ಇದರಿಂದಾಗಿ ಮೂರನೇ ದಿನದಾಟ ತಡವಾಗಿ ಆರಂಭವಾಗಬೇಕಾಯಿತು.
ಬರೋಡದಲ್ಲಿ ನಡೆಯುತ್ತಿರುವ ಎಲೈಟ್ ಎ ಗುಂಪಿನ ಪಂದ್ಯದ ಮೂರನೇ ದಿನದಂದು ಈ ವಿವಾದ ಬೆಳಕಿಗೆ ಬಂದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ನಲ್ಲಿ 246 ರನ್ ಕಲೆಹಾಕಿತು. ಇತ್ತ ಬರೋಡಾ ತಂಡ 166 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ 125 ರನ್‌ಗಳಿಗೂ ಮೀರಿದ ಸ್ಕೋರ್‌ನೊಂದಿಗೆ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಬೇಕಾಗಿದ್ದ ಜಮ್ಮು ಕಾಶ್ಮೀರ ತಂಡ ಮೂರನೇ ದಿನದ ಆಟ ಪ್ರಾರಂಭವಾಗುವ ಮೊದಲು ಆತಿಥೇಯ ಬರೋಡಾ ರಾತ್ರೋರಾತ್ರಿ ಪಿಚ್ ಅನ್ನು ಟ್ಯಾಂಪರ್ ಮಾಡಿದೆ ಎಂದು ಆರೋಪ ಹೊರಿಸಿ ಮೈದಾನಕ್ಕಿಳಿಯಲು ನಿರಾಕರಿಸಿತು.
ಜನವರಿ 30 ರಂದು ಪಂದ್ಯ ಆರಂಭವಾದ ರಿಲಯನ್ಸ್ ಕ್ರೀಡಾಂಗಣದ ಪಿಚ್ ಮೂರನೇ ದಿನದಲ್ಲಿ ಸಂಪೂರ್ಣವಾಗಿ ಬದಲಾಗಿದೆ ಎಂಬುದು ಜಮ್ಮು ಕಾಶ್ಮೀರ ತಂಡದ ಆರೋಪವಾಗಿತ್ತು. ಅಲ್ಲದೆ ಕೃನಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡವು ಪಿಚ್ ಟ್ಯಾಂಪರ್ ಮಾಡಿದೆ ಎಂದು ಆರೋಪಿಸಿ ಪ್ರವಾಸಿ ತಂಡವು ಮೈದಾನಕ್ಕೆ ಇಳಿಯಲು ನಿರಾಕರಿಸಿತು.
ಈ ಆರೋಪದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಕೋಚ್ ಅಜಯ್ ಶರ್ಮಾ, ಪಂದ್ಯದ ಅಂಪೈರ್ ಮತ್ತು ರೆಫರಿ ಇಬ್ಬರಿಗೂ ದೂರು ನೀಡಿದರು. ನಂತರ, ಸುದೀರ್ಘ ಚರ್ಚೆ ಮತ್ತು ವಿವರಣೆಯ ಬಳಿಕ, ಅಂತಿಮವಾಗಿ ಒಂದೂವರೆ ಗಂಟೆಗಳ ವಿಳಂಬದ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು. ಈ ವಿವಾದ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ಪಿಚ್‌ನ ಬಣ್ಣ ಬದಲಾವಣೆಗೆ ಪಿಚ್‌ನ ಆರ್ದ್ರತೆಯೇ ಕಾರಣ ಎಂದಿದೆ.
ವಾಸ್ತವವಾಗಿ, ವಿವಾದಕ್ಕೆ ದೊಡ್ಡ ಕಾರಣವೆಂದರೆ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಎರಡೂ ತಂಡಗಳಿಗೆ ಈ ಪಂದ್ಯ ಬಹುಮುಖ್ಯವಾಗಿದೆ. ಕಳೆದ ಪಂದ್ಯದಲ್ಲಿ ಮುಂಬೈಯಂತಹ ಬಲಿಷ್ಠ ತಂಡವನ್ನು ಮಣಿಸಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಕ್ವಾರ್ಟರ್ ಫೈನಲ್‌ಗೆ ತಲುಪಲು ಈ ಪಂದ್ಯ ಡ್ರಾದಲ್ಲಿ ಅಂತ್ಯಕೊಂಡರೆ ಸಾಕು. ಆದರೆ ಬರೋಡಾ ತಂಡ ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮನ್ನು ಬೇಗ ಆಲೌಟ್ ಮಾಡಲು ಬರೋಡಾ ತಂಡ ಅವರಿಗೆ ಬೇಕಾದಂತೆ ಪಿಚ್ ಅನ್ನು ಬದಲಿಸಿದೆ ಎಂಬುದು ಜಮ್ಮು ಕಾಶ್ಮೀರ ತಂಡದ ಆರೋಪವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Sat, 1 February 25