
ಪಾಕಿಸ್ತಾನ್ ತಂಡದ ಯುವ ಪ್ರತಿಭೆ ರಝಾವುಲ್ಲಾ ಖಾನ್ ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 21 ವರ್ಷದ ಯುವ ವೇಗಿ ರಝಾವುಲ್ಲಾ ಖಾನ್, ತಮ್ಮ ಬ್ಯಾಟಿಂಗ್ ಚಾಕಚಕ್ಯತೆಯಿಂದ ಕ್ರಿಕೆಟ್ ಲೋಕವೇ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ರಝಾವುಲ್ಲಾ ಖಾನ್ ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್ನೊಂದಿಗೆ ರಝಾವುಲ್ಲಾ ಚಚ್ಚಿದ್ದು 63 ಎಸೆತಗಳಲ್ಲಿ 81 ರನ್ಗಳು. ಇದರಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 4 ಫೋರ್ಗಳು ಒಳಗೊಂಡಿದ್ದವು. ಈ 9 ಸಿಕ್ಸರ್‌ಗಳೊಂದಿಗೆ ರಝಾವುಲ್ಲಾ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಮೂಲಕ 21 ವರ್ಷದ ರಝಾವುಲ್ಲಾ ಖಾನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೂರು ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲಿ ಒಂದು ವಿಶ್ವ ದಾಖಲೆ ಎಂಬುದು ವಿಶೇಷ.
ಮೂಲತಃ ಬಲಗೈ ವೇಗದ ಬೌಲರ್ ಆಗಿರುವ ರಝಾವುಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಅವರ ಬೌಲಿಂಗ್ ಸಾಮರ್ಥ್ಯಕ್ಕಾಗಿ. ಆದರೆ, ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅವರು, ತಾವೊಬ್ಬ ಅತ್ಯುತ್ತಮ ‘ಹಿಟ್ಟರ್’ ಎಂಬುದನ್ನು ಸಾಬೀತುಪಡಿಸಿದರು.
ಇಂಗ್ಲೆಂಡ್‌ನ ಸ್ಟಾರ್ ಬೌಲರ್‌ಗಳಾದ ಜೋಫ್ರಾ, ಒಲೀ ರಾಬಿನ್ಸನ್ ಮತ್ತು ಗಸ್ ಅಟ್ಕಿನ್ಸನ್ ಅವರ ಓವರ್‌ಗಳಲ್ಲಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸಿದ ರೀತಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಈ ಸಿಡಿಲಬ್ಬದದ ಬ್ಯಾಟಿಂಗ್ನೊಂದಿಗೆ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 449 ರನ್ಗಳಿಸಿ ಆಲೌಟ್ ಆಗಿದೆ.
ಇದನ್ನೂ ಓದಿ: ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಡೌಟ್!
ಅತ್ತ ಮೊದಲ ಇನಿಂಗ್ಸ್ನಲ್ಲಿ 320 ರನ್ಗಳ ಮುನ್ನಡೆ ಹೊಂದಿರುವ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 130 ರನ್ಗಳ ಗುರಿ ಪಡೆದುಕೊಂಡಿದೆ. ಈ 130 ರನ್ಗಳಿಸಿದರೆ ಆಂಗ್ಲರ ಪಡೆ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದ್ದಾರೆ.