2024ರ ಐಪಿಎಲ್ (IPL 2024) ಆರಂಭಕ್ಕೂ ಮುನ್ನ ತಂಡದಲ್ಲಿ ಹಲವು ಪ್ರಮುಖ ಬದಲಾವಣೆಗಳಿಗೆ ಕೈಹಾಕಿರುವ ಆರ್ಸಿಬಿ (RCB) ಫ್ರಾಂಚೈಸ್ ಇದೀಗ ತಂಡಕ್ಕೆ ನೂತನ ನಿರ್ದೇಶಕರನ್ನು ನೇಮಕ ಮಾಡಿದೆ. ಈ ಮಾಹಿತಿಯನ್ನು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫ್ರಾಂಚೈಸ್, ಇಂಗ್ಲೆಂಡ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮೊ ಬೊಬಾಟ್ (Mo Bobat) ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. ಈ ಹಿಂದೆ ಮೈಕ್ ಹೆಸ್ಸನ್ (Mike Hesson) ನಿರ್ವಹಿಸಿದ್ದ ಈ ಪಾತ್ರವನ್ನು ಇನ್ನು ಮುಂದೆ ಬೊಬಾಟ್ ನಿರ್ವಹಿಸಲಿದ್ದಾರೆ. ಪ್ರಸ್ತುತ ಇಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೊಬಾಬ್ ಮುಂದಿನ ವರ್ಷದ ಆರಂಭದಲ್ಲಿ ಇಸಿಬಿಯಲ್ಲಿ ತಮ್ಮ ಸ್ಥಾನವನ್ನು ತೊರೆದು ಆರ್ಸಿಬಿ ಸೇರಿಕೊಳ್ಳಲಿದ್ದಾರೆ.
ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಫ್ರಾಂಚೈಸ್, ‘ಆರ್‌ಸಿಬಿ ತಂಡದ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ನೇಮಿಸಲಾಗಿದೆ. 2019 ರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಬೊಬಾಟ್, 12 ವರ್ಷಗಳ ಕಾಲ ಇಸಿಬಿ ಸೆಟಪ್‌ನ ಭಾಗವಾಗಿದ್ದಾರೆ. ಈ ಸಮಯದಲ್ಲಿ ಇಂಗ್ಲೆಂಡ್ ಟಿ20 ಮತ್ತು ಏಕದಿನ ವಿಶ್ವಕಪ್‌ಗಳನ್ನು ಎತ್ತಿಹಿಡಿದಿದೆ. ಅಲ್ಲದೆ ಬೊಬಾಟ್ ಅವರು, ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಆಂಡಿ ಫ್ಲವರ್ ಅವರೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಬರೆದಿದೆ.
RCB: ‘ನಿರಾಸೆ ತಂದಿದೆ’; ಆರ್ಸಿಬಿಯಿಂದ ಹೊರಬಿದ್ದ ಕೂಡಲೇ ಮೌನ ಮುರಿದ ಮೈಕ್ ಹೆಸ್ಸನ್
ಆರ್ಸಿಬಿ ಚೇರ್ಮನ್ ಪ್ರಥಮೇಶ್ ಮಿಶ್ರಾ ಈ ಬಗ್ಗೆ ಮಾತನಾಡಿ, ‘ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಆರ್ಸಿಬಿ ಯಾವಾಗಲೂ ಪ್ರದರ್ಶನ-ಆಧಾರಿತ ವಿಧಾನದ ಮೇಲೆ ಕೇಂದ್ರೀಕರಿಸಿದೆ. ಇಷ್ಟು ದಿನ ಇಂಗ್ಲೆಂಡ್ ತಂಡದಲ್ಲಿ ಈ ಪಾತ್ರ ನಿರ್ವಹಿಸಿರುವ ಬೊಬಾಟ್ ಅವರು ತಮ್ಮನ್ನು ತಾವು ಈಗಾಗಲೇ ಸಾಬೀತುಪಡಿಸಿದ್ದಾರೆ. ಪರಿಣತಿ ಮತ್ತು ವರ್ಷಗಳ ಅನುಭವದೊಂದಿಗೆ ಅವರು ಆರ್ಸಿಬಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದಿದ್ದಾರೆ.
RCB appoints Mo Bobat as the Director of Cricket for IPL. 🚨
Bobat has served England Cricket as their Performance Director since 2019, and has been a part of the ECB set up for 12 years, during which England lifted the T20I and ODI World Cups. 🏆
Bobat has also worked very… pic.twitter.com/Q61k6WgNPI
— Royal Challengers Bangalore (@RCBTweets) September 29, 2023
ಇನ್ನು ಆರ್ಸಿಬಿ ತಂಡಕ್ಕೆ ಸೇರಿದ ಬಳಿಕ ಮಾತನಾಡಿದ ಬೊಬಾಟ್, ‘ನಾನು ಆರ್ಸಿಬಿ ತಂಡದವನ್ನು ಕ್ರಿಕೆಟ್ ನಿರ್ದೇಶಕನಾಗಿ ಸೇರಲು ಉತ್ಸುಕನಾಗಿದ್ದೇನೆ. ಆರ್ಸಿಬಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಅವರಿಗೆ ಸೇವೆ ಸಲ್ಲಿಸಲು ಇದು ದೊಡ್ಡ ಗೌರವವಾಗಿದೆ. ಆಂಡಿ ಫ್ಲವರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Fri, 29 September 23