ರೋಹಿತ್ ಶರ್ಮಾ ಕ್ಯಾಚ್​​ಗೆ ಕೈ ಹಾಕಿದ ರಿಷಭ್ ಪಂತ್: ಆಮೇಲೆನಾಯ್ತು ನೀವೇ ನೋಡಿ

|

Updated on: Dec 08, 2024 | 6:36 AM

Australia vs India: ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 1 ವಿಕೆಟ್ ಕಳೆದುಕೊಂಡು 86 ರನ್​ ಗಳಿಸಿದೆ. ಕ್ರೀಸ್​​ನಲ್ಲಿ ನಾಥನ್ ಮೆಕ್​ಸ್ವೀನಿ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಮಿಚೆಲ್ ಸ್ಟಾರ್ಕ್​ ಅವರ ಮಾರಕ ದಾಳಿಗೆ ತತ್ತರಿಸಿ ಕೇವಲ 180 ರನ್​​ಗಳಿಗೆ ಆಲೌಟ್ ಆಗಿದೆ. ಆಸೀಸ್ ಪರ ಮಿಂಚಿನ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 13 ರನ್​​ಗಳಿಗೆ ಮೊದಲ ವಿಕೆಟ್ ಕಳೆದುಕೊಳ್ಳಬೇಕಿತ್ತು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಮಾಡಿದ ದೊಡ್ಡ ಎಡವಟ್ಟಿನಿಂದಾಗಿ ಆರಂಭಿಕ ಆಟಗಾರ ನಾಥನ್ ಮೆಕ್​ಸ್ವೀನಿ ಜೀವದಾನ ಪಡೆದರು.

ಜಸ್​​ಪ್ರೀತ್ ಬುಮ್ರಾ ಎಸೆದ 7ನೇ ಓವರ್​​ನ 3ನೇ ಎಸೆತದಲ್ಲಿ ಮೆಕ್​ಸ್ವೀನಿ ಮೊದಲ ಸ್ಲಿಪ್​​ನಲ್ಲಿದ್ದ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದ್ದರು. ಚೆಂಡು ಇನ್ನೇನು ರೋಹಿತ್ ಶರ್ಮಾ ಕೈ ಸೇರಲಿದೆ ಅನ್ನುವಷ್ಟರಲ್ಲಿ ರಿಷಭ್ ಪಂತ್ ಬಲಭಾಗಕ್ಕೆ ಡೈವ್ ಹೊಡೆದು ಚೆಂಡು ಹಿಡಿಯುವ ಪ್ರಯತ್ನ ಮಾಡಿದರು. ಆದರೆ ಈ ಪ್ರಯತ್ನದಲ್ಲಿ ವಿಫಲರಾದರು.

ಅತ್ತ ರೋಹಿತ್ ಶರ್ಮಾಗೆ ಸುಲಭ ಕ್ಯಾಚ್ ಆಗಿದ್ದರೂ, ರಿಷಭ್ ಪಂತ್ ವಿನಾಕಾರಣ ಡೈವ್ ಹೊಡೆದು ಮೆಕ್​ಸ್ವೀನಿ ಅವರ ಔಟ್ ಅನ್ನು ತಪ್ಪಿಸಿದರು. 3 ರನ್​ಗಳಿಸಿದ್ದ ವೇಳೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮೆಕ್​ಸ್ವೀನಿ ಮೊದಲ ದಿನದಾಟದ ಮುಕ್ತಾಯದ ವೇಳೆಗೆ 38 ರನ್ ಕಲೆಹಾಕಿದ್ದಾರೆ.

ಇನ್ನು ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 1 ವಿಕೆಟ್ ಕಳೆದುಕೊಂಡು 86 ರನ್​ ಗಳಿಸಿದೆ. ಕ್ರೀಸ್​​ನಲ್ಲಿ ನಾಥನ್ ಮೆಕ್​ಸ್ವೀನಿ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Published on: Dec 07, 2024 08:55 AM