17ನೇ ಆವೃತ್ತಿಯ ಐಪಿಎಲ್ (IPL 2024) ಇನ್ನೇನೂ ಮುಕ್ತಾಯಕ್ಕೆ ಬಂದು ನಿಂತಿದೆ. ಲೀಗ್ ಹಂತ ಕೊನೆಗೊಳ್ಳಲು ಕೆಲವೇ ಕೆಲವು ಪಂದ್ಯಗಳು ಬಾಕಿ ಉಳಿದಿವೆ. ಇದಾದ ಬಳಿಕ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಮೇ 26 ರಂದು ಫೈನಲ್ ಪಂದ್ಯ ನಡೆಯಲ್ಲಿದೆ. ಆ ಬಳಿಕ ಟಿ20 ವಿಶ್ವಕಪ್ (T20 World Cup 2024) ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾವನ್ನು (Team India) ಕೂಡ ಪ್ರಕಟಿಸಲಾಗಿದೆ. ಈ ಮಿನಿ ಸಮರಕ್ಕೆ ಭಾರತ ತಂಡ ಎರಡು ಗುಂಪುಗಳಾಗಿ ಅಮೆರಿಕಕ್ಕೆ ಹಾರಲಿದೆ. ಆದರೆ ಈ ನಡುವೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ಭಾರತ ಟಿ20 ವಿಶ್ವಕಪ್ ತಂಡದ ಉಪನಾಯಕತ್ವದ ಜವಬ್ದಾರಿ ಹೊತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು (Hardik Pandya) ತಂಡಕ್ಕೆ ಆಯ್ಕೆ ಮಾಡುವುದು ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ಗೆ (Rohit Sharma and Ajit Agarkar) ಸ್ವಲ್ಪವೂ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ.
ವಾಸ್ತವವಾಗಿ 2024 ರ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ 15 ಆಟಗಾರರ ಆಯ್ಕೆಯನ್ನು ಕಳೆದ ತಿಂಗಳ ಕೊನೆಯ ವಾರದಲ್ಲಿ ಮಾಡಲಾಯಿತು. ಅಹಮದಾಬಾದ್ನಲ್ಲಿ ತಂಡದ ಆಯ್ಕೆ ನಡೆದಿತ್ತು. ಆದರೆ ಆ ಸಮಯದಲ್ಲಿ ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಇಷ್ಟವಿರಲಿಲ್ಲ ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ನಾಯಕ ರೋಹಿತ್ ಶರ್ಮಾಗೂ ಕೂಡ ಹಾರ್ದಿಕ್ರನ್ನು ತಂಡಕ್ಕೆ ತೆಗೆದುಕೊಳ್ಳಲು ಇಷ್ಟವಿರಲಿಲ್ಲ ಎಂದು ವರದಿಯಲ್ಲಿ ಹೇಳಿದೆ. ಹಾಗಾದರೆ ಹಾರ್ದಿಕ್ ಪಾಂಡ್ಯ ಅವರನ್ನು ಏಕೆ ಆಯ್ಕೆ ಮಾಡಲಾಯಿತು ಎಂಬುದು ಈಗ ಪ್ರಶ್ನೆ?. ಅಲ್ಲದೆ ಪಾಂಡ್ಯರನ್ನು ತಂಡಕ್ಕೆ ಆಯ್ಕೆ ಮಾಡಿದ್ದು ಮಾತ್ರವಲ್ಲದೆ ಅವರನ್ನು ತಂಡದ ಉಪನಾಯಕರನ್ನಾಗಿಯೂ ಮಾಡಲಾಗಿದೆ. ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆಗಾರರ ಇಚ್ಛೆಯಿಲ್ಲದೆ ಇದೆಲ್ಲ ಹೇಗೆ ಸಾಧ್ಯವಾಯಿತು? ಎಂಬುದು ಕಾಡುವ ಪ್ರಶ್ನೆಯಾಗಿದೆ.
IPL 2024: ‘ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾರ್ದಿಕ್ ಪಾಂಡ್ಯ’; ಕನ್ನಡಿಗನ ಅಚ್ಚರಿಯ ಹೇಳಿಕೆ
ಹೆಚ್ಚಿನ ಒತ್ತಡದಿಂದಾಗಿ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. ಅದೇ ಒತ್ತಡದಲ್ಲಿ ಅವರಿಗೆ ಟೀಂ ಇಂಡಿಯಾದ ಉಪನಾಯಕತ್ವವನ್ನೂ ನೀಡಲಾಗಿದೆ. ಆದರೆ, ಭಾರತ ತಂಡದ ಆಯ್ಕೆಗಾರರು ಮತ್ತು ನಾಯಕನ ಮೇಲೆ ಯಾರ ಒತ್ತಡವಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಇದೀಗ ಟಿ20 ವಿಶ್ವಕಪ್ನಲ್ಲಿ ಒತ್ತಡದಿಂದ ತೆಗೆದುಕೊಂಡ ಈ ನಿರ್ಧಾರದ ಪರಿಣಾಮವನ್ನು ಟೀಂ ಇಂಡಿಯಾ ಹೇಗೆ ಎದುರಿಸುತ್ತದೆ ಎಂಬುದನ್ನು ಕಾದನೋಡಬೇಕಿದೆ.
ಏಪ್ರಿಲ್ 30 ರಂದು ಭಾರತೀಯ ಟಿ20 ತಂಡದ ಆಯ್ಕೆಯಾದ ಕೆಲವು ದಿನಗಳ ನಂತರ, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಪತ್ರಿಕಾಗೋಷ್ಠಿಯನ್ನು ನಡೆಸಿದಾಗಲೂ ಈ ವಿಷಯ ಪ್ರಸ್ತಾಪಿಸಲಾಯಿತು. ಕಳಪೆ ಫಾರ್ಮ್ ನಡುವೆಯೂ ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯ ಆಯ್ಕೆದಾರರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಗರ್ಕರ್, ‘ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮತ್ತು ನಾಲ್ಕು ಓವರ್ ಬೌಲಿಂಗ್ ಮಾಡುವ ಆಟಗಾರನ ಅವಶ್ಯಕತೆ ನಮಗಿತ್ತು. ಪ್ರಸ್ತುತ ಹಾರ್ದಿಕ್ ಹೊರತಾಗಿ ಬೇರೆ ಆಯ್ಕೆ ಲಭ್ಯವಿಲ್ಲದ ಕಾರಣ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Tue, 14 May 24