T20 World Cup 2022: 11 ವರ್ಷದ ಬಾಲಕನ ಬೌಲಿಂಗ್​ಗೆ ಟೀಂ ಇಂಡಿಯಾ ನಾಯಕ ಫುಲ್ ಫಿದಾ..!

T20 World Cup 2022: ನಾಯಕನ ಕರೆಯಿಂದ ಸಂತೋಷಗೊಂಡ ಈ ಬಾಲಕ ನೆಟ್ಸ್‌ನಲ್ಲಿ ರೋಹಿತ್​ಗೆ ಕೆಲವು ಎಸೆತಗಳನ್ನು ಬೌಲ್ ಮಾಡಿದ್ದಾನೆ. ಬಾಲಕನ ಬೌಲಿಂಗ್​ ಕಂಡು ರೋಹಿತ್​ ಕೂಡ ಆಶ್ಚರ್ಯಗೊಂಡಿದ್ದಾರೆ.

T20 World Cup 2022: 11 ವರ್ಷದ ಬಾಲಕನ ಬೌಲಿಂಗ್​ಗೆ ಟೀಂ ಇಂಡಿಯಾ ನಾಯಕ ಫುಲ್ ಫಿದಾ..!
ಬಾಲಕನೊಂದಿಗೆ ರೋಹಿತ್
Updated By: ಪೃಥ್ವಿಶಂಕರ

Updated on: Oct 17, 2022 | 11:45 AM

ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಟಿ20 ವಿಶ್ವಕಪ್‌ಗಾಗಿ (T20 World Cup 2022) ತಯಾರಿ ನಡೆಸುತ್ತಿದೆ. ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನಾಡಿದ ರೋಹಿತ್ (Rohit Sharma) ಬಳಗ ಒಂದರಲ್ಲಿ ಸೋತ್ತು, ಒಂದರಲ್ಲಿ ಗೆಲುವು ಸಾಧಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಇನ್ನೇರಡು ಅಭ್ಯಾಸ ಪಂದ್ಯಗಳನ್ನು ಆಡಲಿರುವ ಟೀಂ ಇಂಡಿಯಾ, ಈ ಅಭ್ಯಾಸ ಪಂದ್ಯಗಳ ತಯಾರಿಗಾಗಿ ಪರ್ತ್​ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತವಾಗಿದೆ. ಈ ವೇಳೆ ಟೀಂ ಇಂಡಿಯಾ ನಾಯಕನ ಕಣ್ಣಿಗೆ 11 ವರ್ಷದ ಬಾಲಕ ಬಿದ್ದಿದ್ದು, ಆತನ ಬೌಲಿಂಗ್​ಗೆ ರೋಹಿತ್ ಶರ್ಮಾ ಫುಲ್ ಫಿದಾ ಆಗಿದ್ದಾರೆ. ಈತನ ಬೌಲಿಂಗ್​ ಕೌಶಲ್ಯಕ್ಕೆ ಮನಸೋತ ಹಿಟ್​ಮ್ಯಾನ್ ಆತನನ್ನು ನೆಟ್ಸ್​ಗೆ ಕರೆದು ಬೌಲಿಂಗ್ ಮಾಡುವಂತೆ ಕೇಳಿಕೊಂಡಿದ್ದಾರೆ. ನಾಯಕನ ಕರೆಗೆ ಫುಲ್ ಖುಷಿಯಾದ ಬಾಲಕ ನೆಟ್ಸ್​ಗೆ ಬಂದು ರೋಹಿತ್​ಗೆ ಬೌಲಿಂಗ್ ಹಾಕಿದ್ದಾರೆ. ನಾಯಕ ರೋಹಿತ್ ಕೂಡ ಈ ಬಾಲಕನ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

ವಾಸ್ತವವಾಗಿ, ಟೀಂ ಇಂಡಿಯಾ ಅಭ್ಯಾಸಕ್ಕೆಂದು ಪರ್ತ್​ ಮೈದಾನಕ್ಕೆ ಬಂದಿದೆ. ಈ ವೇಳೆ ಕೆಲ ಮಕ್ಕಳು ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಈ 11 ವರ್ಷದ ಬಾಲಕನೂ ಇದ್ದು, ಈತನ ಬೌಲಿಂಗ್ ಆಕ್ಷನ್ ತುಂಬಾ ಇಷ್ಟವಾಗಿ ರೋಹಿತ್ ಆ ಬಾಲಕನನ್ನು ತಮ್ಮ ಬಳಿಗೆ ಕರೆದಿದ್ದಾರೆ. ಬಳಿಕ ಈ ಪೋರನನ್ನು ತನ್ನೊಂದಿಗೆಗ ಕರೆದುಕೊಂಡು ಹೋಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿಸಿ, ತಾನು ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಪೋರನ ಕೈಚೆಳಕಕ್ಕೆ ಕ್ರೀಡಾ ಜಗತ್ತು ಶಹಬಾಸ್​ಗಿರಿ ಹೇಳಿದೆ.

ರೋಹಿತ್​ ಫಿದಾ

ಬಿಸಿಸಿಐ ಅಪ್‌ಲೋಡ್ ಮಾಡಿರುವ ಈ ವೀಡಿಯೊದಲ್ಲಿ, ತಂಡದ ವಿಶ್ಲೇಷಕ ಹರಿ ಪ್ರಸಾದ್ ಮೋಹನ್ ಮಾತನಾಡಿದ್ದು, ಅಂದಿನ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಇದರಲ್ಲಿ ಅವರು, “ನಾವು (ಟೀಂ ಇಂಡಿಯಾ) ಮಧ್ಯಾಹ್ನದ ಸೆಷನ್‌ಗಾಗಿ ಪರ್ತ್​ ಮೈದಾನಕ್ಕೆ ತೆರಳಿದೆವು. ಆ ವೇಳೆಯಲ್ಲಿ ಅಲ್ಲಿ ಸುಮಾರು 100 ಮಕ್ಕಳು ತಮ್ಮ ಬೆಳಗಿನ ಸೆಷನ್​ನಲ್ಲಿ ನಿರತರಾಗಿದ್ದರು. ಆ ನೂರು ಮಕ್ಕಳಲ್ಲಿ ಒಬ್ಬ ಬಾಲಕ ಮಾತ್ರ ತನ್ನ ಅದ್ಭುತ ಬೌಲಿಂಗ್​ನಿಂದ ಎಲ್ಲರ ಗಮನ ಸೆಳೆಯುತ್ತಿದ್ದ.ಆತನ ಬೌಲಿಂಗ್ ಆ್ಯಕ್ಷನ್ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾದರು. ಇದನ್ನು ಗಮನಿಸಿದ ರೋಹಿತ್, ಕೂಡಲೇ ಡ್ರೆಸಿಂಗ್ ರೂಮ್​ನಿಂದ ತೆರಳಿ, ಆ ಬಾಲಕನನ್ನು ಕರೆದು ನೆಟ್ಸ್​ನಲ್ಲಿ ನನಗೆ ಬೌಲಿಂಗ್ ಮಾಡುವಂತೆ ಕೇಳಿಕೊಂಡರು. ನಾಯಕನ ಈ ಕರೆಗೆ ಫುಲ್ ಖುಷಿಯಾದ ಆ ಬಾಲಕ ನೆಟ್ಸ್​ನಲ್ಲಿ ಬೌಲಿಂಗ್ ಹಾಕಿದರು ಎಂದಿದ್ದಾರೆ.

ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಬಾಲಕನಿಗೂ ಆಶ್ಚರ್ಯ

ಭಾರತೀಯ ಮೂಲದವನಾದ ಈ ಬಾಲಕನ ಹೆಸರು ದೃಶಿಲ್ ಚೌಹಾಣ್ ಆಗಿದ್ದು, ತನ್ನ ಪಾಡಿಗೆ ತಾನು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ದೃಶಿಲ್​ಗೆ ರೋಹಿತ್​ ಶರ್ಮಾ ಅವರ ಕೋರಿಕೆ ಫುಲ್ ಶಾಕ್ ನೀಡಿದೆ. ನಾಯಕನ ಕರೆಯಿಂದ ಸಂತೋಷಗೊಂಡ ಈ ಬಾಲಕ ನೆಟ್ಸ್‌ನಲ್ಲಿ ರೋಹಿತ್​ಗೆ ಕೆಲವು ಎಸೆತಗಳನ್ನು ಬೌಲ್ ಮಾಡಿದ್ದಾನೆ. ಬಾಲಕನ ಬೌಲಿಂಗ್​ ಕಂಡು ರೋಹಿತ್​ ಕೂಡ ಆಶ್ಚರ್ಯಗೊಂಡಿದ್ದಾರೆ. ಅಭ್ಯಾಸದ ನಂತರ ಈ ಬಾಲಕನನ್ನು ರೋಹಿತ್, ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಂಡದ ಉಳಿದ ಆಟಗಾರನನ್ನು ಬೇಟಿಯಾದ ಬಾಲಕ ಅವರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾನೆ. ಆ ಬಳಿಕ ರೋಹಿತ್ ಈ ಮಗುವಿಗೆ ಆಟೋಗ್ರಾಫ್ ನೀಡಿ ಅಲ್ಲಿಂದ ಬೀಳ್ಕೊಟ್ಟಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:42 am, Mon, 17 October 22