ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಲ್ರೌಂಡ್ ಆಟವಾಡಿದ ಟೀಮ್ ಇಂಡಿಯಾ (India vs New Zealand) 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ನಿರ್ವಹಣೆ ತೋರಿದ ಹರ್ಷಲ್ ಪಟೇಲ್ (Harshal Patel) ಹಾಗೂ ರೋಹಿತ್ ಶರ್ಮಾ- ಕೆಎಲ್ ರಾಹುಲ್ (Rohit Sharma – KLRahul) ಜೋಡಿಯಾ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಸಾಧಿಸಿತು. 18ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ರಿಷಭ್ ಪಂತ್ (Rishabh Pant) ತಂಡವನ್ನು ಜಯದ ದಡ ಮುಟ್ಟಿಸಿದರು. ಈ ಮೂಲಕ ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ನಾಯಕ ರೋಹಿತ್ ಶರ್ಮಾ ಚೊಚ್ಚಲ ಚುಟುಕು ಸರಣಿಯನ್ನು ಮುಡಿಗೇರಿಸಿಕೊಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಹಿಟ್ಮ್ಯಾನ್ ರೋಹಿತ್ (Rohit Sharma) ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಮಹತ್ವದ ಮಾಹಿತಿಯೊಂದನ್ನು ಹೇಳಿದ್ದಾರೆ.
ಮೊದಲಿಗೆ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ನಮ್ಮ ತಂಡದ ಎಲ್ಲ ವಿಭಾಗದಿಂದ ಅದ್ಭುತ ಪ್ರದರ್ಶನ ಮೂಡಿಬಂದಿದೆ. ಇಂಥಹ ಕಂಡೀಶನ್ನಲ್ಲಿ ಆಟವಾಡುವುದು ಸುಲಭವಲ್ಲ, ಹೀಗಿರುವಾಗ ನಮ್ಮ ಆಟಗಾರರ ಪ್ರದರ್ಶನ ಚೆನ್ನಾಗಿತ್ತು. ನ್ಯೂಜಿಲೆಂಡ್ನವರದ್ದು ಕ್ವಾಲಿಟಿ ಬ್ಯಾಟಿಂಗ್ ಇದೆ ಎಂಬುದು ನಮಗೆ ತಿಳಿದಿದೆ. ಆರಂಭದಲ್ಲಿ ಅವರು ಅತ್ಯುತ್ತಮ ಹೊಡೆತಗಳನ್ನು ಆಯ್ಕೆ ಮಾಡಿಕೊಂಡರು. ಎದುರಾಳಿಯ ಕೇವಲ ಒಂದು ವಿಕೆಟ್ ಕೀಳುವವರೆಗೆ ಮಾತ್ರ ಬಳಿಕ ಪಂದ್ಯದ ಗತಿ ಬದಲಾಗುತ್ತದೆ ಎಂದು ನಾನು ನಮ್ಮ ಬೌಲರ್ಗಳಿಗೆ ಹೇಳುತ್ತಲೇ ಇದ್ದೆ. ನಮ್ಮ ಬೆಂಚ್ ಬಲ ಕೂಡ ಚೆನ್ನಾಗಿದೆ. ಅವಕಾಶ ಸಿಕ್ಕಾಗೆಲ್ಲ ಆಟಗಾರರ ಅತ್ಯುತ್ತಮ ಪ್ರದರ್ಶನ ತೋರುತ್ತಾರೆ. ಅವರಿಗೆ ಸ್ವಾತಂತ್ರ್ಯ ನೀಡುವುದು ನನ್ನ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
“ನಮ್ಮದೊಂದು ಯುವ ಪಡೆ. ಸಾಕಷ್ಟು ಪಂದ್ಯಗಳನ್ನು ಆಡಿದ ಆಟಗಾರರು ನಮ್ಮ ತಂಡದಲ್ಲಿಲ್ಲ. ಆದರೆ, ಅವರಿಗೂ ಸಮಯವನ್ನು ನೀಡಬೇಕು. ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ಈಗಲೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡುತ್ತೇವೆ. ಆಡದ ಆಟಗಾರರು ತಂಡದಲ್ಲಿ ಇದ್ದಾರೆ. ಅವರಿಗೂ ಅವಕಾಶವನ್ನು ನೀಡುತ್ತೇವೆ, ಅವರ ಸಮಯವೂ ಬರುತ್ತದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಟಿ20 ಪಂದ್ಯಗಳಿವೆ” ಎಂದು ಮೂರನೇ ಟಿ20 ಪಂದ್ಯಕ್ಕೂ ಮುನ್ನ ಬದಲಾವಣೆಯ ಸೂಚನೆ ನೀಡಿದ್ದಾರೆ.
ಇನ್ನು ಪದಾರ್ಪಣೆ ಪಂದ್ಯದಲ್ಲೇ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಹರ್ಷಲ್ ಪಟೇಲ್ ಪ್ರದರ್ಶನದ ಬಗ್ಗೆ ಮಾತನಾಡಿರುವ ರೋಹಿತ್, “ಹರ್ಷಲ್ ಪಟೇಲ್ ತಾನು ಏನು ಎಂಬುದು ಮತ್ತೆ ಸಾಬೀತು ಪಡಿಸಿದ್ದಾರೆ. ಅವರೊಬ್ಬ ಕೌಶಲ್ಯಪೂರ್ಣ ಬೌಲರ್. ಈರೀತಿಯ ಕಂಡೀಶನ್ನಲ್ಲಿ ಅವರು ಸ್ಲೋವರ್ ಬಾಲ್ ಅನ್ನು ಅದ್ಭುತವಾಗಿ ಮಾಡುತ್ತಾರೆ” ಎಂದು ಹಾಡಿಹೊಗಳಿದ್ದಾರೆ.
ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರೋಹಿತ್ ನಿರೀಕ್ಷೆಯಂತೆಯೇ ಪ್ರವಾಸಿಗರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಬ್ಯಾಟರ್‌ಗಳ ಅಬ್ಬರದ ನಡುವೆಯೂ ಹರ್ಷಲ್ ದಾಳಿಗೆ ನಲುಗಿದ ಕಿವೀಸ್ 6 ವಿಕೆಟ್‌ಗೆ 153 ರನ್ ಪೇರಿಸಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ, ರೋಹಿತ್-ರಾಹುಲ್ ಜೋಡಿಯ ಅರ್ಧಶತಕದ ನೆರವಿನಿಂದ 17.2 ಓವರ್‌ಗಳಲ್ಲಿ 3 ವಿಕೆಟ್‌ಗೆ 155 ರನ್ ಗಳಿಸಿ ಜಯಿಸಿತು. ಜೊತೆಗೆ ಸರಣಿಯನ್ನೂ ವಶಪಡಿಸಿಕೊಂಡಿತು.
India vs New Zealand T20: ರೋಹಿತ್-ದ್ರಾವಿಡ್ ಮಾಸ್ಟರ್ ಪ್ಲಾನ್ಗೆ ಮಕಾಡೆ ಮಲಗಿದ ನ್ಯೂಜಿಲೆಂಡ್: ಸರಣಿ ಕೈವಶ
(Rohit Sharma Talking about harshal Patel and indian performance in a post-match presentation)