ಸಕಿಬುಲ್ ಸಿಡಿಲಬ್ಬರದ ಸೆಂಚುರಿ: ಏಕದಿನ ಪಂದ್ಯಲ್ಲಿ ಗರಿಷ್ಠ ಸ್ಕೋರ್ ವಿಶ್ವ ದಾಖಲೆ

Vijay Hazare Trophy; ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆ ಬಿಹಾರ ತಂಡದ ಪಾಲಾಗಿದೆ. ಅದು ಕೂಡ ನಾಯಕ ಸಕಿಬುಲ್ ಗನಿ ಅವರ ಸಿಡಿಲಬ್ಬರದ ಶತಕದೊಂದಿಗೆ. ಈ ಸೆಂಚುರಿಯೊಂದಿಗೆ ಲಿಸ್ಟ್ ಎ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಹೆಗ್ಗಳಿಕೆಗೂ ಸಕಿಬುಲ್ ಗನಿ ಪಾತ್ರರಾಗಿದ್ದಾರೆ.

ಸಕಿಬುಲ್ ಸಿಡಿಲಬ್ಬರದ ಸೆಂಚುರಿ: ಏಕದಿನ ಪಂದ್ಯಲ್ಲಿ ಗರಿಷ್ಠ ಸ್ಕೋರ್ ವಿಶ್ವ ದಾಖಲೆ
Sakibul Gani

Updated on: Dec 24, 2025 | 1:30 PM

ರಾಂಚಿಯ ಜೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಬಿಹಾರ ತಂಡವು ಬರೋಬ್ಬರಿ 574 ರನ್​ಗಳನ್ನು ಕಲೆಹಾಕಿದೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 15 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ ಬರೋಬ್ಬರಿ 190 ರನ್ ಕಲೆಹಾಕಿದರು.

ಈ ಭರ್ಜರಿ ಶತಕದೊಂದಿಗೆ ವಿಸ್ಫೋಟಕ ಆರಂಭ ಪಡೆದ ಬಿಹಾರ ಪರ ಅಂತಿಮ ಹಂತದಲ್ಲಿ ನಾಯಕ ಸಕಿಬುಲ್ ಗನಿ ಅಬ್ಬರಿಸಿದರು. ಅಂತಿಮ 10 ಓವರ್​ಗಳ ವೇಳೆ ಆರ್ಭಟಿಸಿದ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಭಾರತದ ಪರ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದರು.

ಸಕಿಬುಲ್ ಗನಿ ಭರ್ಜರಿ ದಾಖಲೆ:

ಕೇವಲ 32 ಎಸೆತಗಳಲ್ಲಿ ಸೆಂಚುರಿ ಚಚ್ಚುವ ಮೂಲಕ ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅನ್​ಮೋಲ್ ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. 2024 ರಲ್ಲಿ ಪಂಜಾಬ್ ಬ್ಯಾಟರ್ ವಿಜಯ ಹಝಾರೆ ಟೂರ್ನಿಯಲ್ಲಿ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಬರೋಬ್ಬರಿ 574 ರನ್​ಗಳು:

ಸಕಿಬುಲ್ ಗನಿ ಹಾಗೂ ವೈಭವ್ ಸೂರ್ಯವಂಶಿ ಬಾರಿಸಿದ ವಿಸ್ಫೋಟಕ ಸೆಂಚುರಿಗಳ ನೆರವಿನೊಂದಿಗೆ ಬಿಹಾರ ತಂಡವು 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 574 ರನ್​ ಕಲೆಹಾಕಿದೆ. ಈ ಮೂಲಕ ಬಿಹಾರ ತಂಡವು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗರಿಷ್ಠ ಮೊತ್ತಗಳಿಸಿದ ವಿಶ್ವ ದಾಖಲೆ ದಾಖಲೆ ನಿರ್ಮಿಸಿದೆ.

ಅರುಣಾಚಲ ಪ್ರದೇಶ್ (ಪ್ಲೇಯಿಂಗ್ XI): ಕಮ್ಶಾ ಯಾಂಗ್ಫೋ (ನಾಯಕ), ಸೂರ್ಯಾಂಶ್ ಸಿಂಗ್, ಟೆಚಿ ನೇರಿ, ತಡಕಮಲ್ಲ ಮೋಹಿತ್, ನೀಲಂ ಓಬಿ, ನಬಮ್ ಟೆಂಪೋಲ್, ಆದಿತ್ಯ ವರ್ಮಾ, ಧೀರಜ್ ಆಂಟಿನ್, ಟೆಚಿ ಸಾನಿಯಾ, ಮಿಬೊಮ್ ಮೊಸು, ಟೆಚಿ ಡೋರಿಯಾ.

ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್… ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಬಿಹಾರ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಸಕಿಬುಲ್ ಗನಿ (ನಾಯಕ), ಆಯುಷ್ ಲೋಹರುಕಾ (ವಿಕೆಟ್ ಕೀಪರ್), ಮಂಗಲ್ ಮಹರೂರ್, ಪಿಯೂಷ್ ಸಿಂಗ್, ಆಕಾಶ್ ರಾಜ್, ಬಿಪಿನ್ ಸೌರಭ್, ಸೂರಜ್ ಕಶ್ಯಪ್, ಹಿಮಾಂಶು ತಿವಾರಿ, ಸಬೀರ್ ಖಾನ್, ಬಾದಲ್ ಕನೌಜಿಯಾ.