
ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ( Women’s World Cup Final) ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ಶಫಾಲಿ ವರ್ಮಾ (Shafali Verma) ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬದಲಿ ಆಟಗಾರ್ತಿಯಾಗಿ ತಂಡ ಸೇರಿಕೊಂಡಿದ್ದ ಶಫಾಲಿ ವಿಶ್ವಕಪ್ ಫೈನಲ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದರು. ಇದೀಗ ವಿಶ್ವಕಪ್ ಮುಗಿಸಿ ಹೊರಬಂದಿರುವ ಶಫಾಲಿಗೆ ತಂಡವೊಂದರ ನಾಯಕತ್ವ ಸಿಕ್ಕಿದೆ. ಲೇಡಿ ಸೆಹ್ವಾಗ ಖ್ಯಾತಿಯ ಶಫಾಲಿ ಅವರನ್ನು ಸೀನಿಯರ್ ಮಹಿಳಾ ಅಂತರ-ವಲಯ ಟಿ20 ಟ್ರೋಫಿಯ ನಾಯಕಿಯಾಗಿ ನೇಮಿಸಲಾಗಿದೆ. ಈ ಟ್ರೋಫಿಯಲ್ಲಿ ಅವರು ಉತ್ತರ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಸೀನಿಯರ್ ಮಹಿಳಾ ಅಂತರ-ವಲಯ ಟಿ20 ಟ್ರೋಫಿ ನವೆಂಬರ್ 4 ರಂದು ಪ್ರಾರಂಭವಾಗಿದೆ.
ಶಫಾಲಿ ವರ್ಮಾ ನಾಯಕತ್ವದಲ್ಲಿ , ಆರಾಧನಾ ಬಿಷ್ತ್, ಬವನ್‌ದೀಪ್ ಕೌರ್, ದಿಯಾ ಯಾದವ್, ಹರ್ಲೀನ್ ಡಿಯೋಲ್, ನಜ್ಮಾ ಸುಲ್ತಾನಾ ಮತ್ತು ನೀನಾ ಚೌಧರಿ ಆಡಲಿದ್ದಾರೆ. ಶ್ವೇತಾ ಶೆರಾವತ್, ಅಮನ್‌ದೀಪ್ ಕೌರ್, ಆಯುಷಿ ಸೋನಿ, ನೀತು ಸಿಂಗ್, ಶಿವಾನಿ ಸಿಂಗ್, ತಾನ್ಯಾ ಭಾಟಿಯಾ ಮತ್ತು ಅನನ್ಯ ಶರ್ಮಾ ಕೂಡ ತಂಡದಲ್ಲಿದ್ದಾರೆ. ಕೋಮಲ್‌ಪ್ರೀತ್ ಕೌರ್, ಮನ್ನತ್ ಕಶ್ಯಪ್, ಮರಿಯಾ ನೂರೆನ್, ಪರುಣಿಕಾ ಸಿಸೋಡಿಯಾ, ಸೋನಿ ಯಾದವ್ ಮತ್ತು ಸುಮನ್ ಗುಲಿಯಾ ಕೂಡ ತಂಡದಲ್ಲಿದ್ದಾರೆ.
ಸೀನಿಯರ್ ಮಹಿಳಾ ಅಂತರ ವಲಯ ಟಿ20 ಟ್ರೋಫಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿವೆ. ಕೇಂದ್ರ ವಲಯ, ಪೂರ್ವ ವಲಯ, ಈಶಾನ್ಯ ವಲಯ, ಉತ್ತರ ವಲಯ, ದಕ್ಷಿಣ ವಲಯ ಮತ್ತು ಪಶ್ಚಿಮ ವಲಯದ ತಂಡಗಳು ಭಾಗವಹಿಸಲಿವೆ. ನವೆಂಬರ್ 4 ರಂದು ಪ್ರಾರಂಭವಾಗುವ ಈ ಪಂದ್ಯಾವಳಿ ನವೆಂಬರ್ 14 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆಯಲಿವೆ.
ವಿಶ್ವಕಪ್ ಫೈನಲ್‌ನಲ್ಲಿ 87 ರನ್ ಚಚ್ಚಿದ ಶಫಾಲಿ
ಶಫಾಲಿ ವರ್ಮಾ ಬಗ್ಗೆ ಹೇಳುವುದಾದರೆ, ಮಹಿಳಾ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಫಾಲಿ ಅವರನ್ನು ಮೊದಲಿಗೆ ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಿರಲಿಲ್ಲ. ಆದರೆ ಪ್ರತೀಕಾ ರಾವಲ್ ಗಾಯಗೊಂಡಿದ್ದರಿಂದಾಗಿ ಶಫಾಲಿ ಅವರನ್ನು ಸೆಮಿಫೈನಲ್‌ಗೂ ಮೊದಲು ತಂಡಕ್ಕೆ ಆಯ್ಕೆ ಮಾಡಲಾಯಿತು. ಆದಾಗ್ಯೂ ಸೆಮಿಫೈನಲ್‌ನಲ್ಲಿ ವಿಫಲರಾಗಿದ್ದ ಶಫಾಲಿ, ಫೈನಲ್‌ನಲ್ಲಿ ಮಾತ್ರ 78 ಎಸೆತಗಳಲ್ಲಿ 87 ರನ್ ಬಾರಿಸಿದ್ದು ಮಾತ್ರವಲ್ಲದೆ ಎರಡು ವಿಕೆಟ್‌ಗಳನ್ನು ಸಹ ಪಡೆದರು. ಶಫಾಲಿ ಅವರ ಈ ಪ್ರದರ್ಶನದಿಂದಾಗಿ ಭಾರತ ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟವೂ ಲಭಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ