- Kannada News Photo gallery Cricket photos India Women Win 2025 Cricket World Cup: 91 Cr Prize and Pakistan's Earnings Revealed
ವಿಶ್ವ ಗೆದ್ದ ಭಾರತಕ್ಕೆ 91 ಕೋಟಿ ರೂ.! ಒಂದೂ ಪಂದ್ಯ ಗೆಲ್ಲದ ಪಾಕಿಸ್ತಾನಕ್ಕೆ ಸಿಕ್ಕಿದ್ದೆಷ್ಟು?
Women's ODI World Cup Prize Money: ಭಾರತ 2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಈ ಗೆಲುವಿಗೆ ಐಸಿಸಿ ಮತ್ತು ಬಿಸಿಸಿಐನಿಂದ ಒಟ್ಟು 91 ಕೋಟಿ ರೂ. ಬಹುಮಾನ ಲಭಿಸಿದೆ.ಇತ್ತ, ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಗೆಲ್ಲದ ಪಾಕಿಸ್ತಾನ ಮಹಿಳಾ ತಂಡ ಕೇವಲ 4.70 ಕೋಟಿ ರೂ. ಪಡೆದಿದೆ.
Updated on: Nov 04, 2025 | 7:04 PM

ಭಾರತದಲ್ಲಿ ನಡೆದ 2025 ರ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತ ವನಿತಾ ಪಡೆ ಗೆದ್ದುಕೊಂಡಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಭಾರತೀಯ ಮಹಿಳಾ ತಂಡಕ್ಕೆ ಐಸಿಸಿ ವತಿಯಿಂದ ಹಾಗೂ ಬಿಸಿಸಿಐ ಕಡೆಯಿಂದ ಬಹುಮಾನಗಳ ಸುರಿಮಳೆಯೇ ಹರಿದು ಬಂದಿದೆ.

ಒಟ್ಟಾರೆಯಾಗಿ ಭಾರತೀಯ ಮಹಿಳಾ ತಂಡಕ್ಕೆ 91 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಇದರಲ್ಲಿ 40 ಕೋಟಿ ರೂಪಾಯಿಗಳನ್ನು ಚಾಂಪಿಯನ್ ಪಟ್ಟ ಅಲಂರಿಸಿದಕ್ಕಾಗಿ ಐಸಿಸಿಯಿಂದ ಬಹುಮಾನವಾಗಿ ನೀಡಲಾಗಿದೆ. ಹಾಗೆಯೇ ಮೊಟ್ಟ ಮೊದಲ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಬಿಸಿಸಿಐನಿಂದಲೂ 51 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗಿದೆ.

ಹೀಗಾಗಿ ಭಾರತ ಮಹಿಳಾ ತಂಡಕ್ಕೆ 91 ಕೋಟಿ ರೂಪಾಯಿ ಬಹುಮಾನ ದೊರೆಯಲಿದೆ. ಆದರೆ ಕ್ರೀಡಾಭಿಮಾನಿಗಳು ಎತ್ತಿರುವ ಪ್ರಶ್ನೆಯೆಂದರೆ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ಪಾಕಿಸ್ತಾನ ಮಹಿಳಾ ತಂಡಕ್ಕೆ ಎಷ್ಟು ಹಣ ಸಿಗುತ್ತದೆ ಎಂಬುದು. ಗುಂಪು ಹಂತದಲ್ಲಿ ಪ್ರತಿ ಗೆಲುವಿಗೆ ಇಂತಿಷ್ಟು ಮೊತ್ತವನ್ನು ನಿಗದಿಪಡಿಸಲಾಗಿತ್ತು. ಹಾಗಾದರೆ ಪಾಕಿಸ್ತಾನಕ್ಕೆ ಎಷ್ಟು ಹಣ ಸಿಗುತ್ತದೆ?

ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನಿ ಮಹಿಳಾ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಶ್ರೀಲಂಕಾದ ಕೊಲಂಬೊದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನ ಆಡಿತ್ತು. ಆದರೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಒಟ್ಟು 8 ತಂಡಗಳ ನಡುವೆ ನಡೆದ ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಕೊನೆಯ ಸ್ಥಾನವನ್ನು ಪಡೆದುಕೊಂಡಿತ್ತು.

ಪಾಕಿಸ್ತಾನಿ ಮಹಿಳಾ ತಂಡದ ಕಳಪೆ ಪ್ರದರ್ಶನದ ನಂತರ ಪಿಸಿಬಿ ಮುಜುಗರಕ್ಕೊಳಗಾಗಿದೆ. ಹೀಗಾಗಿ ತಂಡಕ್ಕೆ ಒಂದು ರೂಪಾಯಿಯನ್ನೂ ಬಹುಮಾನವಾಗಿ ನೀಡಲಾಗಿಲ್ಲ. ಆದರೆ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಪಾಕಿಸ್ತಾನಕ್ಕೆ ಒಂದು ನಿರ್ದಿಷ್ಟ ಮೊತ್ತ ಸಿಕ್ಕಿದೆ. ಪಾಕಿಸ್ತಾನವು ತನ್ನ ಕರೆನ್ಸಿಯಲ್ಲಿ 14.95 ಕೋಟಿ ಪಡೆದಿದೆ. ಆದರೆ ಭಾರತೀಯ ರೂಪಾಯಿಯಲ್ಲಿ ಅದರ ಮೌಲ್ಯ 4.70 ಕೋಟಿ ರೂ. ಆಗಿದೆ.
