ಬಹುನಿರೀಕ್ಷಿತ ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಶುಭಾರಂಭ ಮಾಡುವ ಇರಾದೆಯಲ್ಲಿದ್ದ ಪಾಕಿಸ್ತಾನ್ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿದೆ. ತಂಡದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಈ ವಿಷಯವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ಪಾಕ್ನ ಖ್ಯಾತ ಕ್ರೀಡಾ ವರದಿಗಾರ್ತಿ ಝೈನಬ್ ಅಬ್ಬಾಸ್.
ಏಕದಿನ ವಿಶ್ವಕಪ್ ಕುರಿತಾದ ಸಂವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಜೊತೆ ಮಾತನಾಡುವಾಗ ಝೈನಬ್ ಅಬ್ಬಾಸ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಹೀನ್ ಅಫ್ರಿದಿ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಎಡಗೈ ಬೆರಳು ಊದಿಕೊಂಡಿದೆ ಎಂದು ತಿಳಿಸಿದ್ದಾರೆ.
ಶಾಹೀನ್ ಅಫ್ರಿದಿ ಎಡಗೈ ವೇಗಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದೀಗ ಅದೇ ಕೈನ ಬೆರಳುಗಳು ಊದಿಕೊಂಡಿದೆ. ಹೀಗಾಗಿ ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಝೈನಬ್ ಅಬ್ಬಾಸ್ ಹೇಳಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತದ ವಿರುದ್ಧದ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಗಾಯಗೊಂಡಿದ್ದರು. ಇದೇ ಕಾರಣದಿಂದಾಗಿ ಅವರು ಮೈದಾನದಿಂದ ಕೆಲ ಕಾಲ ಹೊರಗುಳಿದಿದ್ದರು. ಆದರೆ ಏಕದಿನ ವಿಶ್ವಕಪ್ ತಂಡದ ಆಯ್ಕೆ ವೇಳೆ ಅವರು ಸಂಪೂರ್ಣ ಫಿಟ್ ಆಗಿದ್ದೀನಿ ಎಂದು ತಿಳಿಸಿದ್ದರು. ಆದರೀಗ ಗಾಯದ ವಿಚಾರ ಬಹಿರಂಗವಾಗುತ್ತಿದ್ದಂತೆ, ವಿಶ್ವಕಪ್ನಲ್ಲಿ ಅವರು 100 ಪ್ರತಿಶತವನ್ನು ನೀಡಲು ಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಸೀಮ್ ಶಾ ಔಟ್:
ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಗಾಯಗೊಂಡಿದ್ದರಿಂದ ಯುವ ವೇಗಿ ನಸೀಮ್ ಶಾ ಹೊರಬಿದ್ದಿದ್ದರು. ಇದು ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಝೈನಬ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಶಾಹೀನ್ ಅವರ ಬೆರಳಿಗೆ ಗಾಯವಾಗಿರುವುದು ಪಾಕ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇತ್ತ ಈಗಾಗಲೇ ನಸೀಮ್ ಶಾ ಹೊರಗುಳಿದಿರುವ ಕಾರಣ ಶಾಹೀನ್ ಅಫ್ರಿದಿ ಆಡಲೇಬೇಕಾಗುತ್ತದೆ. ಇದರ ಹೊರತಾಗಿ ಪಾಕ್ ತಂಡದ ಬಳಿ ಯಾವುದೇ ಆಯ್ಕೆಯಿಲ್ಲ.
ಹೀಗಾಗಿ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ಶಾಹೀನ್ ಅಫ್ರಿದಿ ಅವರನ್ನು ಹೇಗೆ ಬಳಸಿಕೊಳ್ಳಲಿದೆ ಕಾದು ನೋಡಬೇಕಿದೆ ಎಂದು ಝೈನಬ್ ಅಬ್ಬಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: ICC World Cup 2023 Schedule: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ