ಪ್ರಸ್ತುತ ಒಮಾನ್ ಮತ್ತು ನೆದರ್ಲೆಂಡ್ಸ್ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈಗಾಗಲೇ ಉಭಯ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿದ್ದು, ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1ರಿಂದ ಸಮಬಲಗೊಳಿಸಿದ್ದವು. ಹೀಗಾಗಿ ಸರಣಿಯ ಕೊನೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅದರಂತೆ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ 29 ರನ್‌ಗಳಿಂದ ಗೆದ್ದು ಒಮಾನ್ ವಿರುದ್ಧ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಇಲ್ಲಿ, ಒಮಾನ್ ಪಂದ್ಯವನ್ನು ಸೋತರೂ ಸಹ, ತಂಡದ ಆಟಗಾರನೊಬ್ಬ 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಟಿ20 ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವದಾಖಲೆ ನಿರ್ಮಿಸಿದ್ದಾರೆ.
47 ರನ್ ಕಲೆಹಾಕಿದ ನೆದರ್ಲೆಂಡ್ಸ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು. ತಂಡದ ಪರ ಮ್ಯಾಕ್ಸ್ ಒ’ಡೌಡ್ ಅತಿ ಹೆಚ್ಚು ರನ್ ಗಳಿಸಿದರು. ಅವರು 55 ಎಸೆತಗಳಲ್ಲಿ 66 ರನ್ ಗಳಿಸಿದರು. ಉಳಿದಂತೆ ತೇಜ ನಿಡಮನೂರು 36 ರನ್ಗಳ ಕಾಣಿಕೆ ನೀಡಿದರು. ಈ ಇಬ್ಬರನ್ನು ಬಿಟ್ಟರೆ, ತಂಡದ ಮತ್ತ್ಯಾವ ಆಟಗಾರನಿಂದಲೂ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಈ ಗುರಿ ಬೆನ್ನಟ್ಟಿದ ಒಮಾನ್ ತಂಡದ ಪರ ಬರೋಬ್ಬರಿ 8 ಆಟಗಾರರು ಒಂದಂಕಿಗೆ ಸುಸ್ತಾದರು. ಅದರಲ್ಲೂ ಮೊದಲ 6 ಆಟಗಾರರಿಗೆ 10 ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಕೀಲ್ ಅಹ್ಮದ್ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ನಿರ್ಮಿಸಿದರು. ಅವರು 33 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 45 ರನ್ ಗಳಿಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಆದಾಗ್ಯೂ ಶಕೀಲ್ 10ನೇ ಸ್ಥಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಲು ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ದಾಖಲೆಯ ಇನ್ನಿಂಗ್ಸ್ ಮೂಲಕ ಅವರು 2022 ರಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ನ ಅಕೆಲ್ ಹೊಸೈನ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.
ಬ್ಯಾಟಿಂಗ್ ಅಲ್ಲದೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಶಕೀಲ್ ತಮ್ಮ ಖೋಟಾದ 4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರು. ಒಮಾನ್ ಪರ ಅತಿ ಹೆಚ್ಚು ರನ್ ಗಳಿಸಿದ್ದಲ್ಲದೆ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ