
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ (TNPL 2025) ಬ್ಯಾಟರ್ಗಳ ಅಬ್ಬರ ಮುಂದುವರೆದಿದೆ. ಈ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಶಿವಂ ಸಿಂಗ್ ಸಿಕ್ಸರ್ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಶಿವಂ ಅವರಿಗೆ ಒಂದೇ ಒಂದು ಚಾನ್ಸ್ ಸಿಕ್ಕಿರಲಿಲ್ಲ. ಇಡೀ ಟೂರ್ನಿ ಬೆಂಚ್ ಕಾದಿದ್ದ ಆಟಗಾರ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ತನ್ನ ಬ್ಯಾಟಿಂಗ್ ಪರಾಕ್ರಮವನ್ನು ತೆರೆದಿಟ್ಟಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಶಿವಂ ಸಿಂಗ್ ಕಳೆದ ಮೂರು ಪಂದ್ಯಗಳಲ್ಲಿ 2 ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಮೂರು ಪಂದ್ಯಗಳಿಂದ ಕಲೆಹಾಕಿರುವುದು ಬರೋಬ್ಬರಿ 198 ರನ್ಗಳು. ಇದೇ ವೇಳೆ ಶಿವಂ ಸಿಂಗ್ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 12.
ಸಿಕ್ಸ್-ಫೋರ್ಗಳೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಸಂಚಲನ ಸೃಷ್ಟಿಸಿರುವ ಶಿವಂ ಸಿಂಗ್ ಮೂರು ಪಂದ್ಯಗಳಲ್ಲಿ ಎರಡು ಬಾರಿ ಅಜೇಯರಾಗಿ ಉಳಿದಿದ್ದಾರೆ. ಅದರಲ್ಲೂ ಮಧುರೈ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶಿವಂ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 86 ರನ್ ಬಾರಿಸಿದ್ದರು.
ಶಿವಂ ಸಿಂಗ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ದಿಂಡಿಗಲ್ ಡ್ರಾಗನ್ಸ್ ತಂಡವು ಈ ಪಂದ್ಯವನ್ನು 45 ಎಸೆತಗಳು ಬಾಕಿಯಿರುವಂತೆ ಗೆದ್ದುಕೊಂಡರು. ಇದಕ್ಕೂ ಹಿಂದಿನ ಎರಡು ಪಂದ್ಯಗಳಲ್ಲಿ ಶಿವಂ ಸಿಂಗ್ 30 ಮತ್ತು ಅಜೇಯ 82 ರನ್ ಬಾರಿಸಿದ್ದರು.
ಅಲ್ಲದೆ ಈ ಬಾರಿಯ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 12 ಭರ್ಜರಿ ಸಿಕ್ಸ್ ಹಾಗೂ 17 ಫೋರ್ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ
ಅತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದು ಸೀಸನ್ ಬೆಂಚ್ ಕಾದಿದ್ದ ಶಿವಂ ಸಿಂಗ್ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.