
ಭಾರತ ಮಹಿಳಾ ತಂಡ ನವೆಂಬರ್ 9ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕಾಗಿ ಬಿಸಿಸಿಐ ಕೂಡ 3 ತಂಡಗಳನ್ನು ಪ್ರಕಟಿಸಿತ್ತು. ಈ ಪ್ರವಾಸದಲ್ಲಿ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ ಸರಣಿಗಳಲ್ಲಿ ಆಡಲಿದೆ. ಆದರೆ, ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ಗೆ ಯಾವುದೇ ಸರಣಿಯಲ್ಲೂ ಸ್ಥಾನ ನೀಡಲಾಗಿಲ್ಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಶ್ರೇಯಾಂಕಾಗೆ ಆಯ್ಕೆ ಸಮಿತಿ ನಿರಾಸೆ ಮೂಡಿಸಿತ್ತು. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧದ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ, ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದ ಶ್ರೇಯಾಂಕಾ ಇದೀಗ ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸೀನಿಯರ್ ಮಹಿಳಾ ಟಿ20 ಟ್ರೋಫಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನವೆಂಬರ್ 18ರಂದು ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ 2026ರ ಪಂದ್ಯದಲ್ಲಿ ಕರ್ನಾಟಕ ಮಹಿಳಾ ತಂಡ ದೆಹಲಿ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ದೆಹಲಿ ಗೆಲುವು ಸಾಧಿಸಿದರೂ, ಕರ್ನಾಟಕದ ಪರ ಆಡಿದ ಶ್ರೇಯಾಂಕಾ ಪಾಟೀಲ್ ತಮ್ಮ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಶ್ರೇಯಾಂಕಾ, ದೆಹಲಿ ಬೌಲರ್ಗಳ ಬೆವರಿಳಿಸಿದರು. ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆಗೈದ ಅವರು, ತಮ್ಮ ಟಿ20 ವೃತ್ತಿಜೀವನದ ಚೊಚ್ಚಲ ಅರ್ಧಶತಕ ಸಿಡಿಸಿದರು. ಅಷ್ಟೇ ಅಲ್ಲ, ಕೊನೆಯವರೆಗೂ ಅಜೇಯರಾಗಿ ಉಳಿದು ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಕೇವಲ 29 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿದರು. ಬರೋಬ್ಬರಿ 245ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಅವರು, ತಮ್ಮ ಇನ್ನಿಂಗ್ಸ್ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದರು. ಇದು ಶ್ರೇಯಾಂಕಾ ಅವರ ಟಿ20 ವೃತ್ತಿಜೀವನದ ಮೊದಲ ಅರ್ಧಶತಕವಾಗಿದ್ದು, ಅವರ ವೈಯಕ್ತಿಕ ಗರಿಷ್ಠ ಮೊತ್ತವೂ ಆಗಿದೆ. ಬಹಳ ದಿನಗಳ ಬಳಿಕ ಬ್ಯಾಟಿಂಗ್ನಲ್ಲಿ ಇಂತಹ ಸ್ಫೋಟಕ ಆಟ ಪ್ರದರ್ಶಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
IND vs AUS: ಭಾರತ ಮಹಿಳಾ ತಂಡ ಪ್ರಕಟ: ಶ್ರೇಯಾಂಕಾ ಪಾಟೀಲ್ಗೆ ಇಲ್ಲ ಸ್ಥಾನ
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಹಿಳಾ ತಂಡ, ಶ್ರೇಯಾಂಕಾ ಪಾಟೀಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. 176 ರನ್ಗಳ ಗುರಿ ಬೆನ್ನಟ್ಟಿದ ದೆಹಲಿ ತಂಡ ಕೇವಲ 17 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಬ್ಯಾಟಿಂಗ್ನಲ್ಲಿ 76 ರನ್ ಸಿಡಿಸಿ ಮಿಂಚಿದ ಶ್ರೇಯಾಂಕಾ, ಬೌಲಿಂಗ್ನಲ್ಲೂ ತಮ್ಮ ಕೈಚಳಕ ತೋರಿಸಿದರು. ದೆಹಲಿ ತಂಡದ ಎರಡು ವಿಕೆಟ್ ಕಬಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದರು.