Shreyas Iyer: ಪಂದ್ಯ ಮುಗಿದ ಬಳಿಕ ಆಂಡ್ರೆ ರಸೆಲ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ಗೊತ್ತೇ?

| Updated By: Vinay Bhat

Updated on: Apr 02, 2022 | 10:59 AM

Andre Russel, KKR vs PBKS: ಆಂಡ್ರೆ ರಸೆಲ್ ಅವರ ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ 14.3 ಓವರ್‌ಗಳಲ್ಲಿ 4 ವಿಕೆಟ್‌ಗೆ 141 ರನ್‌ ಚಚ್ಚಿ ಜಯದ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡೋಣ.

Shreyas Iyer: ಪಂದ್ಯ ಮುಗಿದ ಬಳಿಕ ಆಂಡ್ರೆ ರಸೆಲ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ಗೊತ್ತೇ?
Andre Russel and Shreyas Iyer post-match presentation
Follow us on

ಐಪಿಎಲ್ 2022 ರಲ್ಲಿ (IPL 2022) ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ (KKR vs PBKS) ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದು ಮಾತ್ರವಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅಲ್ಲದೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಅನ್ನು ಕೂಡ ಕೆಕೆಆರ್ ತಂಡದ ಆಟಗಾರರೇ ಮುಡಿಗೇರಿಸಿಕೊಂಡರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು. ಸುಲಭ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ತಂಡ ಆರಂಭಿಕ ವೈಫಲ್ಯ ನಡುವೆಯೂ ಆಂಡ್ರೆ ರಸೆಲ್ ಅವರ ಸ್ಫೋಟಕ ಆಟದ ನೆರವಿನಿಂದ 14.3 ಓವರ್‌ಗಳಲ್ಲಿ 4 ವಿಕೆಟ್‌ಗೆ 141 ರನ್‌ ಚಚ್ಚಿ ಜಯದ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡೋಣ.

“ಪಂಜಾಬ್ ಕಿಂಗ್ಸ್ ತಂಡ ಈರೀತಿಯಾಗಿ ಕಮ್​ಬ್ಯಾಕ್ ಮಾಡುತ್ತೆ ಎಂದು ಅಂದುಕೊಂಡಿರಲಿಲ್ಲ. ಆರಂಭದ ಕೆಲ ಓವರ್​ಗಳಲ್ಲಿ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡರು ಕೂಡ ಕೊನೇ ಹಂತದಲ್ಲಿ ಹೋರಾಟ ನಡೆಸಿ ರನ್ ಕಲೆಹಾಕಿದರು. ಪವರ್‌ಪ್ಲೇನಲ್ಲಿ ನಾವು ಎರಡು ವಿಕೆಟ್‌ಗಳನ್ನು ಕಬಳಿಸಿದ್ದರಿಂದ ಸಾಧ್ಯವಾದಷ್ಟು ಬೇಗ ವಿಕೆಟ್‌ಗಳನ್ನು ಉರುಳಿಸಬೇಕೆಂಬ ಆಲೋಚನೆ ನನಗೆ ಬಂತು. ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಬಂದಾಗ ನಮ್ಮ ಉತ್ತಮ ಬೌಲರ್‌ಗಳಿಂದ ಬೌಲ್‌ ಮಾಡಿಸುವುದು ನನ್ನ ತಂತ್ರವಾಗಿತ್ತು. ಅದಕ್ಕಾಗಿ ವರುಣ್ ಮತ್ತು ನರೈನ್​ರನ್ನು ಕೊಂಚ ಸಮಯ ಕಳೆದ ನಂತರ ಬೌಲಿಂಗ್​ಗೆ ಇಳಿಸಿದೆ. ಅವರಿಗೆ ಯಾವ ಬ್ಯಾಟ್ಸ್​ಮನ್​ಗಳಿಗೆ ಹೇಗೆ ಬೌಲಿಂಗ್ ಮಾಡಬೇಕು ಎಂದು ತಿಳಿದಿದೆ,” ಎಂದು ಹೇಳಿದ್ದಾರೆ.

ಇನ್ನು ಈ ಪಂದ್ಯದ ಪ್ರಮಖ ಹೈಲೇಟ್ ಆದ ಆಂಡ್ರೆ ರಸೆಲ್ ಬಗ್ಗೆ ಮಾತನಾಡಿದ ಅಯ್ಯರ್, “ಆಂಡ್ರೆ ರಸೆಲ್‌ ದೊಡ್ಡ ಹೊಡೆತಗಳನ್ನು ಹೊಡೆಯುತ್ತಿದ್ದಾಗ ನಾವು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೆವು. ರಸೆಲ್‌ ಒಂದು ಅಭೂತಪೂರ್ವ ಶಕ್ತಿ. ಅವರು ಒಮ್ಮೆ ಕ್ರೀಸ್‌ಗೆ ಕಚ್ಚಿ ನಿಂತರೆ ತಂಡಕ್ಕೆ ಗೆಲುವುದು ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಎದುರಾಳಿ ಅವರನ್ನು ತಡೆಯಲು ಸಾಧ್ಯವಿಲ್ಲ. ಪಂದ್ಯಕ್ಕೂ ಮುನ್ನ ನಾವಿಬ್ಬರು ಸಾಕಷ್ಟು ಸಂಭಾಷಣೆ ನಡೆಸಿದ್ದೆವು. ನನಗೆ ವಯಸಾಗುತ್ತಿದೆ ಎಂದು ಅವರು ಹೇಳಿದ್ದರು. ಇಲ್ಲ ನೀವು ದಿನದಿಂದ ದಿನಕ್ಕೆ ಶಕ್ತಿಯುತವಾಗುತ್ತಿದ್ದೀರಿ ಎಂದು ಹೇಳಿದೆ. ಜಿಮ್‌ನಲ್ಲಿ ರಸೆಲ್ ಸಾಕಷ್ಟು ಸಮಯ ಕಳೆಯುತ್ತಾರೆ. ತಂಡವನ್ನು ಗೆಲ್ಲಿಸಬೇಕೆಂದ ಹಸಿವು ಅವರಲ್ಲಿ ಎದ್ದು ಕಾಣುತ್ತದೆ. ಮೈದಾನದಲ್ಲಿ ಅವರು ನನ್ನ ಕೆಲಸವನ್ನು ತುಂಬಾ ಸುಲಭವಾಗಿಸಿದ್ದರು. ತಂಡದ ಮೀಟಿಂಗ್‌ ಮೂಲಕ ಅವರು ತಮ್ಮದೇ ಸ್ವಂತ ತಂತ್ರದೊಂದಿಗೆ ಕಣಕ್ಕೆ ಇಳಿದಿದ್ದರು,” ಎಂದು ಶ್ರೇಯಸ್‌ ಅಯ್ಯರ್‌ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.

ಇನ್ನು ಸೋತ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, “ನಾವು ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಬೌಲಿಂಗ್​ನಲ್ಲೂ ರಿಯಲ್ ಫೈಟ್ ನೀಡಲು ಸಾಧ್ಯವಾಗಲಿಲ್ಲ. ಇದು 170 ರನ್ ಕಲೆಹಾಕಬಹುದಾದ ವಿಕೆಟ್. ನಾವು ಉತ್ತಮ ಆರಂಭವೇನು ಪಡೆದುಕೊಂಡೆವು ಆದರೆ, ಅದನ್ನೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಕೆಲವು ವಿಕೆಟ್​ಗಳನ್ನು ಕಳೆದುಕೊಂಡಿದ್ದು ತುಂಬಾ ಸುಲಭವಾಗಿದ್ದವು. ಇದು ಟೂರ್ನಿಯ ಆರಂಭವಷ್ಟೆ, ಕೆಲ ತಪ್ಪುಗಳು ನಡೆಯುತ್ತವೆ. ನಮ್ಮ ಬೌಲರ್​ಗಳು ಕೂಡ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ, ರಸೆಲ್ ಪಂದ್ಯದ ಗತಿಯನ್ನು ಬದಲಾಯಿಸಿದರು,” ಎಂದು ಮಯಾಂಕ್ ಹೇಳಿದರು.

TATA IPL 2022: ಕೆಕೆಆರ್ ಗೆಲುವಿನ ಬಳಿಕ ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್​​ನಲ್ಲಿ ದೊಡ್ಡ ಬದಲಾವಣೆ

Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ