ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಕ್ಕಾಗಿದೆ. ಭಾರತ ತಂಡ ಅಕ್ಟೋಬರ್ 8 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆದರೆ, ಈ ಮೊದಲ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಇನ್-ಫಾರ್ಮ್ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ಅವರಿಗೆ ಡೆಂಘೀ ಸೋಂಕು ದೃಢ ಪಟ್ಟಿದೆ. 24ರ ಹರೆಯದ ಗಿಲ್ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ನಿನ್ನೆ ತರಬೇತಿ ಅವಧಿಯಲ್ಲಿ ಗಿಲ್ ಅವರು ಡೆಂಗ್ಯೂನಿಂದ ಬಳಲುತ್ತಿದ್ದರು ಎಂದು ವರದಿ ಆಗಿದೆ.
2023 ರ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಗಿಲ್, ವಿಶ್ವಕಪ್ ಮೊದಲ ಪಂದ್ಯದಿಂದ ಮಾರಕವಾಗಲಿದ್ದಾರೆ ಎಂದು ನಂಬಲಾಗಿತ್ತು. ಆದರೀಗ ಇವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇವರ ಬದಲು ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆ ಇದೆ.
ICC World Cup: ಕ್ಯಾಪ್ಟನ್ಸಿ ಡೇಯಲ್ಲಿ ಗರಂ ಆದ ರೋಹಿತ್: ವರದಿಗಾರರ ಪ್ರಶ್ನೆಗೆ ಹಿಟ್ಮ್ಯಾನ್ ಖಡಕ್ ಉತ್ತರ
ಗಿಲ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಗಿಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಕೈಬಿಡುವ ಮೊದಲು ಇಂದು ಮತ್ತೊಮ್ಮೆ ಡೆಂಗ್ಯೂ ಪರೀಕ್ಷೆಗೆ ಒಳಗಾಗಲಿದ್ದಾರೆ. ಜ್ವರ ತೀವ್ರವಾಗಿದ್ದರೆ ಗಿಲ್ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಳ್ಳಬಹುದು. “ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ಗೆ ತೀವ್ರ ಜ್ವರವಿತ್ತು. ಈ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಶುಕ್ರವಾರ ಟೆಸ್ಟ್ ನಡೆಸಿ ಆರಂಭಿಕ ಪಂದ್ಯದಲ್ಲಿ ಭಾಗವಹಿಸುವ ಕುರಿತು ಅಂತಿಮ ಕರೆ ತೆಗೆದುಕೊಳ್ಳಲಾಗುವುದು” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಇದರ ಬಗ್ಗೆ ಭಾರತದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಉನ್ನತ ಮಟ್ಟದ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ವಿಶ್ವಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Fri, 6 October 23