ಒಂದೇ ವರ್ಷ 3 ದ್ವಿಶತಕ ಸಿಡಿಸಿದ ಕನ್ನಡಿಗ

Smaran Ravichandran: ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಚಂಡೀಗಢ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಸ್ಮರಣ್ ರವಿಚಂದ್ರನ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 547 ರನ್​​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಒಂದೇ ವರ್ಷ 3 ದ್ವಿಶತಕ ಸಿಡಿಸಿದ ಕನ್ನಡಿಗ
Smaran Ravichandran

Updated on: Nov 18, 2025 | 10:18 AM

ರಣಜಿ ಟೂರ್ನಿಯಲ್ಲಿ ಕರ್ನಾಟಕದ ಯುವ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅವರ ಅಬ್ಬರ ಮುಂದುವರೆದಿದೆ. ಜನವರಿಯಲ್ಲಿ ಪಂಜಾಬ್ ವಿರುದ್ಧ 203 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದ ಸ್ಮರಣ್ ಇದೀಗ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕ ಹಾಗೂ ಚಂಡೀಗಢ್ ತಂಡಗಳು ಮುಖಾಮುಖಿಯಾಗಿವೆ, ಹುಬ್ಬಳಿಯ ಕೆಎಸ್​​ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮರಣ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಅಲ್ಲದೆ ಈ ಪಂದ್ಯದಲ್ಲಿ 362 ಎಸೆತಗಳನ್ನು ಎದುರಿಸಿದ ಸ್ಮರಣ್ ರವಿಚಂದ್ರನ್ 16 ಫೋರ್ ಹಾಗೂ 2 ಸಿಕ್ಸ್​​ಗಳೊಂದಿಗೆ ಅಜೇಯ 227 ರನ್ ಬಾರಿಸಿದರು. ಈ ಭರ್ಜರಿ ದ್ವಿಶತಕದ ನೆರವಿನೊಂದಿಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ಕಳೆದುಕೊಂಡು 547 ರನ್​​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಅಂದಹಾಗೆ ಇದು ಸ್ಮರಣ್ ರವಿಚಂದ್ರನ್ ಅವರ ಈ ವರ್ಷದ ಮೂರನೇ ಡಬಲ್ ಸೆಂಚುರಿ. ಇದಕ್ಕೂ ಮುನ್ನ ಕೇರಳ ವಿರುದ್ಧದ ಪಂದ್ಯದಲ್ಲೂ ಅಜೇಯ 220 ರನ್ ಬಾರಿಸಿ ಮಿಂಚಿದ್ದರು. ಅಲ್ಲದೆ ಜನವರಿಯಲ್ಲಿ ನಡೆದ ಕಳೆದ ಸೀಸನ್​ನ ರಣಜಿ ಟೂರ್ನಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ 203 ರನ್​​ ಗಳಿಸಿದ್ದರು. ಇದೀಗ ಮೂರನೇ ದ್ವಿಶತಕದೊಂದಿಗೆ ಸ್ಮರಣ್ ರವಿಚಂದ್ರನ್ ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ್ದಾರೆ.

ಸ್ಮರಣ್ ಸ್ಮರಣೀಯ ಆರಂಭ:

ಕರ್ನಾಟಕ ಪರ ಈವರೆಗೆ 12 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 22 ವರ್ಷದ ಸ್ಮರಣ್ ರವಿಚಂದ್ರನ್ 3 ದ್ವಿಶತಕ, 1 ಶತಕ ಹಾಗು 3 ಅರ್ಧಶತಕಗಳೊಂದಿಗೆ ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ತನ್ನ ಪ್ರಥಮ ದರ್ಜೆ ಕೆರಿಯರ್​ನಲ್ಲಿ ಅದ್ಭುತ ಆರಂಭ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಟೆಸ್ಟ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

ಇತ್ತ ಟಿ20 ಕ್ರಿಕೆಟ್​ನಲ್ಲೂ ಸ್ಮರಣ್ ಕಡೆಯಿಂದ ಅದ್ಭುತ ಪ್ರದರ್ಶನವೇ ಮೂಡಿ ಬರುತ್ತಿದೆ. ಈವರೆಗೆ 6 ಟಿ20 ಪಂದ್ಯಗಳನ್ನಾಡಿರುವ ಯುವ ಎಡಗೈ ದಾಂಡಿಗ ಒಂದು ಅರ್ಧಶತಕದೊಂದಿಗೆ 170 ರನ್ ಕಲೆಹಾಕಿದ್ದಾರೆ. ಇದೇ ಕಾರಣದಿಂದಾಗಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಸ್ಮರಣ್ ರವಿಚಂದ್ರನ್ ಅವರನ್ನು ಮುಂದಿನ ಸೀಸನ್​ಗಾಗಿ ರಿಟೈನ್ ಮಾಡಿಕೊಂಡಿದೆ. ಅದರಂತೆ ಐಪಿಎಲ್ 2026 ರಲ್ಲಿ ಕರ್ನಾಟಕದ ಯುವ ಎಡಗೈ ದಾಂಡಿಗ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

 

Published On - 9:28 am, Tue, 18 November 25