ಶ್ರೀಲಂಕಾ ಆಟಗಾರರಿಗೆ 2 ವರ್ಷ ಬ್ಯಾನ್ ಬೆದರಿಕೆ..!

Pakistan vs Sri Lanka: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು. ಅಲ್ಲದೆ 27 ಜನರು ಗಾಯಗೊಂಡಿದ್ದರು. ಈ ದಾಳಿಯ ಬೆನ್ನಲ್ಲೇ ಶ್ರೀಲಂಕಾ ಆಟಗಾರರು ತವರಿಗೆ ಮರಳಲು ಇಚ್ಛಿಸಿದ್ದಾರೆ. ಇದಾಗ್ಯೂ ಪಾಕ್ ವಿರುದ್ಧದ ಸರಣಿ ಮುಂದುವರೆಸಲು ಲಂಕಾ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

ಶ್ರೀಲಂಕಾ ಆಟಗಾರರಿಗೆ 2 ವರ್ಷ ಬ್ಯಾನ್ ಬೆದರಿಕೆ..!
Sri Lanka

Updated on: Nov 13, 2025 | 1:31 PM

ಪಾಕಿಸ್ತಾನ್ ವಿರುದ್ಧದ ಏಕದಿನ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ಎಚ್ಚರಿಸಿದೆ. ಈ ಎಚ್ಚರಿಕೆಯ ಹೊರತಾಗಿಯೂ ಯಾರಾದರು ಪಾಕಿಸ್ತಾನ್ ವಿರುದ್ಧದ ಸರಣಿಯಿಂದ ಹಿಂದೆ ಸರಿದರೆ, ಅವರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ಮೂಲಗಳು ತಿಳಿಸಿದೆ.

ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ತಂಡದ ಕೆಲ ಆಟಗಾರರು ತವರಿಗೆ ಮರಳಲು ಮುಂದಾಗಿದ್ದರು. ಪಾಕಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಕೆಲ ಆಟಗಾರರು ತಮ್ಮ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ತವರಿಗೆ ಮರಳಲು ಲಂಕಾ ಕ್ರಿಕೆಟ್ ಬೋರ್ಡ್​ಗೆ ಮನವಿ ಸಲ್ಲಿಸಿದ್ದರು.

ಈ ಮನವಿಯ ಹೊರತಾಗಿಯೂ ಪ್ರವಾಸಿ ತಂಡದ ಪ್ರತಿಯೊಬ್ಬ ಸದಸ್ಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ತಿಳಿಸಿತ್ತು.

ಆದರೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್​ನ ಈ ನಡೆಯಿಂದ ಕೆಲ ಆಟಗಾರರು ಸಂತುಷ್ಟರಾಗಿರಲಿಲ್ಲ. ಅಲ್ಲದೆ ತವರಿಗೆ ಹಿಂತಿರುಗಲು ವ್ಯವಸ್ಥೆಯನ್ನು ಮಾಡಿಕೊಡಲು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನ್ ವಿರುದ್ಧದ ಸರಣಿಯನ್ನು ಮುಂದುವರೆಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ಟೂರ್ನಿಯನ್ನು ಮೊಟಕುಗೊಳಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ಪಾಕಿಸ್ತಾನ ಪ್ರವಾಸವನ್ನು ಅರ್ಧದಲ್ಲೇ ಕೈಬಿಡುವ ಆಟಗಾರರಿಗೆ ಎರಡು ವರ್ಷಗಳ ನಿಷೇಧ ಹೇರಲು ನಿರ್ಧರಿಸಲಾಗಿದೆ. ಇದಾಗ್ಯೂ ಕೆಲ ಆಟಗಾರರು ತವರಿಗೆ ಮರಳಲು ಇಚ್ಛಿಸಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಬದಲಿ ಆಟಗಾರರನ್ನು ಕಳುಹಿಸಿ ಸರಣಿಯನ್ನು ಪೂರ್ಣಗೊಳಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಆಶ್ವಾಸನೆ ನೀಡಿದೆ.

ಪಂದ್ಯಗಳ ದಿನಾಂಕ ಮರುನಿಗದಿ:

ಲಂಕಾ ತಂಡ ಆಟಗಾರರು ತವರಿಗೆ ಹಿಂತಿರುಗಲು ಮುಂದಾಗಿದ್ದರಿಂದ ಗುರುವಾರ ನಡೆಯಬೇಕಿದ್ದ ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಈ ಪಂದ್ಯವನ್ನು ಶುಕ್ರವಾರ ಆಯೋಜಿಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಅಷ್ಟೇ ಅಲ್ಲದೆ ಶನಿವಾರ ನಡೆಯಬೇಕಿದ್ದ ಪಂದ್ಯವನ್ನು ಭಾನುವಾರಕ್ಕೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: IND vs SA: ಆಯ್ಕೆ ಮಾಡಿ ನಿತೀಶ್ ಕುಮಾರ್ ರೆಡ್ಡಿಯನ್ನು ಕೈ ಬಿಟ್ಟಿದ್ದೇಕೆ?

ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಪೂರ್ಣಗೊಳಿಸಲು ಪಾಕಿಸ್ತಾನ್ ಹಾಗೂ ಶ್ರೀಲಂಕಾ ಮುಂದಾಗಿದೆ. ಇದಾದ ಬಳಿಕ ಶ್ರೀಲಂಕಾ, ಪಾಕಿಸ್ತಾನ್ ಹಾಗೂ ಝಿಂಬಾಬ್ವೆ  ನಡುವಣ ತ್ರಿಕೋನ ಟಿ20 ಸರಣಿ ನಡೆಯಲಿದೆ.

 

 

Published On - 1:31 pm, Thu, 13 November 25