ಯಾಕೆ ಹೊರಗಿಟ್ರಿ ಹೇಳಿ?.. ಸಿರಾಜ್ ಕೈಬಿಟ್ಟಿದ್ದಕ್ಕೆ ಸುನಿಲ್ ಗವಾಸ್ಕರ್ ಗರಂ!

ವಿದೇಶಿ ನೆಲದಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿ ನಿಂತಿರುವ, ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕೆ ಬ್ರೇಕ್-ಥ್ರೂ ನೀಡಬಲ್ಲ ಮ್ಯಾಚ್ ವಿನ್ನರ್ ಮೊಹಮ್ಮದ್ ಸಿರಾಜ್ ಅವರನ್ನು ವೆಲ್ಲಿಂಗ್ಟನ್ ಟೆಸ್ಟ್‌ನ ಆಡುವ ಬಳಗದಿಂದ ಹೊರಗಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಅಚ್ಚರಿ ಮೂಡಿಸಿದೆ. ಹಸಿರು ಪಿಚ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಬಲ್ಲ ಸಾಮರ್ಥ್ಯವಿದ್ದರೂ ಸಿರಾಜ್‌ಗೆ ವಿಶ್ರಾಂತಿ ನೀಡಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾಕೆ ಹೊರಗಿಟ್ರಿ ಹೇಳಿ?.. ಸಿರಾಜ್ ಕೈಬಿಟ್ಟಿದ್ದಕ್ಕೆ ಸುನಿಲ್ ಗವಾಸ್ಕರ್ ಗರಂ!
Mohammed Siraj - Sunil Gavaskar
Image Credit source: GettyImages

Updated on: Nov 19, 2026 | 12:00 PM

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವ ಭಾರತ ತಂಡದ ಆಡಳಿತ ಮಂಡಳಿಯ ನಿರ್ಧಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆಯ್ಕೆಯ ಬಗ್ಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗವಾಸ್ಕರ್ ಫುಲ್ ಗರಂ!

ಹಸಿರು ಹುಲ್ಲುಹಾಸಿನ ಪಿಚ್‌ನಲ್ಲಿ ಭಾರತ ತಂಡ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ. ಆದರೆ, ನಾಯಕ ಶುಭ್​ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಜಸ್​ಪ್ರೀತ್ ಬುಮ್ರಾ, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಹಾಗೂ ಯುವ ವೇಗಿ ಅನ್ಶುಲ್ ಕಂಬೋಜ್ ಅವರಿಗೆ ಮಣೆ ಹಾಕಿ, ಸಿರಾಜ್ ಅವರನ್ನು ಬೆಂಚ್ ಕಾಯುವಂತೆ ಮಾಡಿದ್ದಾರೆ.

Loading...

ಈ ಕುರಿತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮಾತನಾಡಿದ ಗವಾಸ್ಕರ್, “ಮೊಹಮ್ಮದ್ ಸಿರಾಜ್ ನಿಮ್ಮ ಅಗ್ರ ನಾಲ್ಕು ಬೌಲರ್‌ಗಳಲ್ಲಿ ಒಬ್ಬರಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ತಂಡದ ಅತ್ಯಂತ ಅನುಭವಿ ವೇಗಿ ಲಭ್ಯವಿದ್ದರೂ ಅವರನ್ನು ಕೈಬಿಟ್ಟಿರುವುದು ಅಚ್ಚರಿ ತಂದಿದೆ. ಸಿರಾಜ್‌ರನ್ನು ಹೊರಗಿಡಲು ನಿಖರ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿ,” ಎಂದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಸಿರಾಜ್ ಪ್ರದರ್ಶನಕ್ಕೆ ಮೆಚ್ಚುಗೆ:

ಇದೇ ವೇಳೆ ಮೊಹಮ್ಮದ್ ಸಿರಾಜ್ ಅವರ ಫಾರ್ಮ್ ಅಥವಾ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂಬುದನ್ನು ಗವಾಸ್ಕರ್ ಒತ್ತಿ ಹೇಳಿದ್ದಾರೆ. “ಅವರು ಭಾರತ ತಂಡವನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ಅವರ ಬೌಲಿಂಗ್ ಲಯವೂ ಉತ್ತಮವಾಗಿದೆ. ಹೀಗಿರುವಾಗ ಅವರನ್ನು ಕೈಬಿಡಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಡಿದ್ದ ಸಿರಾಜ್, ಎರಡು ವಿಕೆಟ್ ಪಡೆದು ಭಾರತದ 3-1 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದ ಬೆನ್ನಲ್ಲೇ ಇದೀಗ ಟೆಸ್ಟ್ ಮ್ಯಾಚ್​ನಿಂದ ಹೊರಗಿಡಲಾಗಿದೆ.

ದಿಗ್ಗಜರ ವಲಯದಲ್ಲೂ ಅಚ್ಚರಿ!

ಕೇವಲ ಗವಾಸ್ಕರ್ ಮಾತ್ರವಲ್ಲದೆ, ಮಾಜಿ ಕೋಚ್ ರವಿಶಾಸ್ತ್ರಿ ಹಾಗೂ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಈ ನಿರ್ಧಾರಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಏಳು ದಿನಗಳ ವಿಶ್ರಾಂತಿಯ ನಂತರವೂ ಸಿರಾಜ್ ಅವರಂತಹ ಮ್ಯಾಚ್ ವಿನ್ನರ್‌ಗೆ ಅವಕಾಶ ನೀಡದಿರುವುದು “ನಂಬಲು ಅಸಾಧ್ಯವಾದ ಸಂಗತಿ” ಎಂದು ರವಿಶಾಸ್ತ್ರಿ ಬಣ್ಣಿಸಿದ್ದಾರೆ. ಮತ್ತೊಂದೆಡೆ, ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.

ವಿದೇಶಿ ನೆಲದಲ್ಲಿ ಸಿರಾಜ್ ದಾಖಲೆ:

2024ರ ಅಕ್ಟೋಬರ್ ನಂತರ ಭಾರತ ಆಡಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲೂ ಸಿರಾಜ್ ಕಾಣಿಸಿಕೊಂಡಿದ್ದರು. ಈ ಸರಣಿಗೂ ಮುನ್ನ 48 ಟೆಸ್ಟ್ ಪಂದ್ಯಗಳಿಂದ 144 ವಿಕೆಟ್ ಪಡೆದಿರುವ ಸಿರಾಜ್, ವಿಶೇಷವಾಗಿ ‘SENA  (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ಆಡಿದ 23 ಟೆಸ್ಟ್‌ಗಳಲ್ಲಿ 91 ವಿಕೆಟ್ ಕಬಳಿಸಿ ಅದ್ಭುತ ದಾಖಲೆ ಹೊಂದಿದ್ದಾರೆ. ಇದಾಗ್ಯೂ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸಿರಾಜ್​ ಅವರನ್ನು ಕೈ ಬಿಟ್ಟಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಸ್ನಿಕೋಮೀಟರ್‌ ಎಡವಟ್ಟು; ಅಂಪೈರ್ ವಿರುದ್ಧ ಶುಭ್‌ಮನ್ ಗಿಲ್ ಕೆಂಡಾಮಂಡಲ!

ಒಟ್ಟಾರೆಯಾಗಿ, ವಿದೇಶಿ ಪಿಚ್‌ಗಳಲ್ಲಿ ಅದ್ಭುತ ದಾಖಲೆ ಹೊಂದಿರುವ ಸಿರಾಜ್ ಅವರಂತಹ ಅನುಭವಿ ವೇಗಿಯನ್ನು ಹೊರಗಿಟ್ಟು, ಯುವ ಬೌಲರ್‌ಗಳಿಗೆ ಮಣೆ ಹಾಕಿರುವ ಗಂಭೀರ್-ಗಿಲ್ ಜೋಡಿಯ ಈ ‘ಬೋಲ್ಡ್’ ನಿರ್ಧಾರ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us