T20 World Cup 2022: ಟಿ20 ವಿಶ್ವಕಪ್ಗಾಗಿ ಭರ್ಜರಿ ತಯಾರಿಯಲ್ಲಿರುವ ಟೀಮ್ ಇಂಡಿಯಾಗೆ (Team India) ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ತಂಡದ ಅಭ್ಯಾಸಕ್ಕಾಗಿ ತೆರಳಬೇಕಿದ್ದ ಇಬ್ಬರು ನೆಟ್ ಬೌಲರ್ಗಳು ಇದೀಗ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಹೀಗೆ ಆಸೀಸ್ ನೆಲದಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳಿಗೆ ನೆರವಾಗಬೇಕಿದ್ದ ಬೌಲರ್ಗಳೆಂದರೆ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್ ಹಾಗೂ ಕುಲ್ದೀಪ್ ಸೇನ್. ಈ ಇಬ್ಬರು ಯುವ ಆಟಗಾರರಿಗೆ ವೀಸಾ ಸಮಸ್ಯೆ ಎದುರಾಗಿದ್ದು, ಹೀಗಾಗಿ ಆಸ್ಟ್ರೇಲಿಯಾಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಉಮ್ರಾನ್ ಮಲಿಕ್ ಹಾಗೂ ಕುಲ್ದೀಪ್ ಸೇನ್ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಟೀಮ್ ಇಂಡಿಯಾದ ನೆಟ್ ಬೌಲರ್ಗಳಾಗಿ ಚೇತನ್ ಸಕರಿಯಾ, ಮುಖೇಶ್ ಕುಮಾರ್ ಹಾಗೂ ಸೌರಭ್ ಕುಮಾರ್ ಈಗಾಗಲೇ ಆಸ್ಟ್ರೇಲಿಯಾಗೆ ತಲುಪಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ಉಮ್ರಾನ್ ಮಲಿಕ್ ಅವರ ವೇಗದ ಅವಶ್ಯಕತೆಯಿತ್ತು.
150 ಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಮಲಿಕ್ ಈ ಹಿಂದೆ ಕೂಡ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಅದರಂತೆ ಈ ಬಾರಿ ಕೂಡ ಹೆಚ್ಚುವರಿ ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೀಗ ಕುಲ್ದೀಪ್ ಸೇನ್ ಹಾಗೂ ಉಮ್ರಾನ್ ಮಲಿಕ್ ಅವರಿಗೆ ವೀಸಾ ಸಿಗುವುದು ವಿಳಂಬವಾಗಿದ್ದು, ಹೀಗಾಗಿ ಆಸ್ಟ್ರೇಲಿಯಾ ಪ್ರಯಾಣ ಮೊಟಕುಗೊಂಡಿದೆ.
ಮತ್ತೊಂದೆಡೆ ಟೀಮ್ ಇಂಡಿಯಾಗೆ ಮೀಸಲು ಆಟಗಾರರಾಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ. ಈ ಮೂವರು ವೇಗಿಗಳಾಗಿರುವ ಕಾರಣ ಇವರನ್ನೇ ಹೆಚ್ಚುವರಿ ನೆಟ್ ಬೌಲರ್ಗಳನ್ನಾಗಿ ಬಳಸಿಕೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಹಾಗೆಯೇ ಈ ಮೂವರು ವೇಗಿಗಳಲ್ಲಿ ಒಬ್ಬರು ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಲಿದ್ದಾರೆ.
ಒಟ್ಟಿನಲ್ಲಿ ಅಕ್ಟೋಬರ್ 23 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಭರ್ಜರಿ ತಯಾರಿಯ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾಗೆ ಉಮ್ರಾನ್ ಮಲಿಕ್ ಅವರ ಅಲಭ್ಯತೆಯು ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ. ಏಕೆಂದರೆ ಆಸೀಸ್ ಪಿಚ್ ವೇಗ ಹಾಗೂ ಬೌನ್ಸ್ಗೆ ಸಹಕಾರಿಯಾಗಿದ್ದು, ಈ ಎರಡರಲ್ಲೂ ಮಲಿಕ್ ಉತ್ತಮ ಸಾಮರ್ಥ್ಯ ಹೊಂದಿದ್ದರು. ಹೀಗಾಗಿ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಅಭ್ಯಾಸ ನಡೆಸಲು ಉಮ್ರಾನ್ ಮಲಿಕ್ ಅವರ ವೇಗವು ಅನುಕೂಲವಾಗುತ್ತಿತ್ತು. ಆದರೀಗ ಯುವ ವೇಗಿಯ ಅಲಭ್ಯತೆಯ ನಡುವೆಯೂ ಟೀಮ್ ಇಂಡಿಯಾ ಅಭ್ಯಾಸವನ್ನು ಮುಂದುವರೆಸಲು ನಿರ್ಧರಿಸಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.