T20 World Cup 2024: ಟಿ20 ವಿಶ್ವಕಪ್ನ ಸೆಮಿಫೈನಲ್ ವೇಳಾಪಟ್ಟಿಯನ್ನು ಭಾರತ ತಂಡ ವಿಶ್ವಕಪ್ ಗೆಲ್ಲಲು ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಗಂಭೀರ ಆರೋಪ ಮಾಡಿದ್ದಾರೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಸೋಲಲು ವೇಳಾಪಟ್ಟಿಯೇ ಕಾರಣ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶ್ ವಿರುದ್ಧ ಸೂಪರ್-8 ಪಂದ್ಯದಲ್ಲಿ ಗೆದ್ದ ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ ಒಂದು ದಿನದ ಸಮಯವಕಾಶ ನೀಡಲಾಗಿದೆ. ಜೂನ್ 25 ರಂದು ಪಂದ್ಯ ಮುಗಿಸಿ ಜೂನ್ 26 ರಂದು ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಆಡಲು ಟ್ರಿನಿಡಾಡ್ಗೆ ಬಂದಿಳಿದಿದೆ. ಇದರಿಂದ ಅಫ್ಘಾನ್ ತಂಡಕ್ಕೆ ಅಭ್ಯಾಸ ಮಾಡಲು ಸಮಯ ಸಿಕ್ಕಿಲ್ಲ.
ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಸೆಮಿಫೈನಲ್ ಮೊದಲು ನಡೆಯಬೇಕಿತ್ತು. ಆದರೆ ಭಾರತ ತಂಡಕ್ಕೆ ಅನುಕೂಲವಾಗುವಂತೆ 2ನೇ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾವನ್ನು ಇರಿಸಲಾಗಿದೆ. ಇದು ಪಕ್ಷಪಾತ ಧೋರಣೆ, ಇದರಿಂದ ಇತರೆ ತಂಡಗಳಿಗೆ ಅನ್ಯಾಯವಾಗಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
ಇಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತೆ ಸೆಮಿಫೈನಲ್ ವೇಳಾಪಟ್ಟಿಯನ್ನು ಮೊದಲೇ ನಿರ್ಧರಿಸಲಾಗಿದ್ದು, ಇದರಿಂದ ಉಳಿದ ತಂಡಗಳಿಗೆ ಅನ್ಯಾಯವಾಗಿರುವುದು ಸ್ಪಷ್ಟ. ಅದರಲ್ಲೂ ಇದೇ ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶಿಸಿದ್ದ ಅಫ್ಘಾನಿಸ್ತಾನ್ ತಂಡವನ್ನು ಸೂಪರ್-8 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಸೆಮಿಫೈನಲ್ ಆಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಫ್ಘಾನಿಸ್ತಾನ್ ತಂಡದ ಕೊನೆಯ ಪಂದ್ಯಕ್ಕೂ ಮುನ್ನವೇ ಸೂಪರ್-8 ಪಂದ್ಯಗಳನ್ನು ಮುಗಿಸಿತ್ತು. ಹೀಗಾಗಿ ಮೊದಲ ಸೆಮಿಫೈನಲ್ ಪಂದ್ಯವು ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ನಡೆಯಬೇಕಿತ್ತು. ಆದರೆ ಭಾರತದ ಪರ ಪಕ್ಷಪಾತ ಮಾಡಿರುವ ಕಾರಣ ಅಫ್ಘಾನಿಸ್ತಾನ್ ತಂಡಕ್ಕೆ ಅನ್ಯಾಯವಾಗಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಬೃಹತ್ ಮೊತ್ತದ ನಿರೀಕ್ಷೆಯೊಂದಿಗೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್ಗಳಲ್ಲಿ ಕೇವಲ 56 ರನ್ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: South Africa: ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ
57 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 1 ವಿಕೆಟ್ ಕಳೆದುಕೊಂಡು 8.5 ಓವರ್ಗಳಲ್ಲಿ 60 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ಪ್ರವೇಶಿಸಿದೆ.
Published On - 10:34 am, Thu, 27 June 24