2024 ರ ಟಿ20 ವಿಶ್ವಕಪ್ ಚಾಂಪಿಯನ್ ಆಗಬೇಕಾದರೆ, ಭಾರತ ಈಗ ಕೇವಲ 2 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಅದರಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗಿದೆ. ಇದಾದ ಬಳಿಕ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ನಾಳೆ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಮುಖಾಮುಖಿ ದಾಖಲೆ ಹಾಗೂ ಈ ಪಂದ್ಯ ನಡೆಯಲ್ಲಿರುವ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುದರ ವಿವರ ಇಲ್ಲಿದೆ.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನ ಪಿಚ್ನಲ್ಲಿ ಇಲ್ಲಿಯವರೆಗೆ ಸ್ಪಿನ್ ಬೌಲರ್‌ಗಳು ಹೆಚ್ಚು ಮೇಲುಗೈ ಸಾಧಿಸಿದ್ದಾರೆ. ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇದುವರೆಗೆ ಟಿ20 ಮಾದರಿಯ 34 ಪಂದ್ಯಗಳು ನಡೆದಿದ್ದು, ಇದರಲ್ಲಿ 16 ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದ್ದರೆ, 14 ಬಾರಿ ಗುರಿ ಬೆನ್ನಟ್ಟಿದ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ ಸುಮಾರು 127 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ ಕೇವಲ 95 ರನ್ ಆಗಿದೆ.
T20 World Cup: ಅತಿ ಹೆಚ್ಚು ಸೆಮಿಫೈನಲ್ ಪಂದ್ಯಗಳನ್ನು ಸೋತ ತಂಡ ಯಾವುದು ಗೊತ್ತಾ?
ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಒಟ್ಟು 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಎರಡು ಬಾರಿ ಗೆದ್ದಿದ್ದರೆ, ಇಂಗ್ಲೆಂಡ್ ಎರಡು ಬಾರಿ ಗೆದ್ದಿದೆ. ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ 2007ರ ವಿಶ್ವಕಪ್‌ನಲ್ಲಿ ನಡೆದಿತ್ತು. ಇದರಲ್ಲಿ ಭಾರತ 18 ರನ್‌ಗಳ ಜಯ ಸಾಧಿಸಿತು. ಇದಾದ ಬಳಿಕ 2009ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಭಾರತವನ್ನು 3 ರನ್‌ಗಳಿಂದ ಸೋಲಿಸಿತ್ತು. ಅದೇ ಸಮಯದಲ್ಲಿ, 2012 ರ ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು 90 ರನ್‌ಗಳಿಂದ ಸೋಲಿಸಿತು. ಇದರ ನಂತರ, 2022 ರ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು, ಇದರಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಗೆದ್ದಿತು.
ಇನ್ನು ಅಂತರರಾಷ್ಟ್ರೀಯ ಟಿ20 ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಉಭಯ ತಂಡಗಳ ನಡುವೆ ಇದುವರೆಗೆ 23 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದ್ದು, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಇನ್ನು ಕಳೆದ 5 ಟಿ20 ಪಂದ್ಯಗಳ ಬಗ್ಗೆ ಹೇಳುವುದಾದರೆ, ಭಾರತ 3 ಮತ್ತು ಇಂಗ್ಲೆಂಡ್ 2 ಪಂದ್ಯಗಳನ್ನು ಗೆದ್ದಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಎರಡೂ ತಂಡಗಳು ಬಲಿಷ್ಠವಾಗಿದ್ದು, ಪಂದ್ಯ ಕಠಿಣವಾಗಿರಲಿದೆ.
ಭಾರತ ತಂಡವು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇದುವರೆಗೆ 3 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಪೈಕಿ ಟೀಂ ಇಂಡಿಯಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯದಲ್ಲಿ ಸೋಲು ಅನುಭವಿಸಬೇಕಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಇಲ್ಲಿ ಕೇವಲ 2 ಟಿ20 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ ಸೋಲನ್ನು ಎದುರಿಸುದ್ದರೆ, ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ