
ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup Final 2026) ಗೆದ್ದು ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂಬ ದಾಖಲೆ ಬರೆಯಲು ಟೀಂ ಇಂಡಿಯಾಗೆ (Team India) ಇನ್ನೊಂದು ಗೆಲುವು ಬೇಕಾಗಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಫೈನಲ್ಗೇರಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಜ್ಜಾಗಿದೆ ನಿಂತಿದೆ. ಉಭಯ ತಂಡಗಳ ನಡುವಿನ ಈ ಫೈನಲ್ ಕಾಳಗ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium) ನಡೆಯಲಿದೆ. ಟೀಂ ಇಂಡಿಯಾಕ್ಕೆ ತವರಿನ ಲಾಭ ಸಿಗುವ ಸಾಧ್ಯತೆಗಳು ಹೆಚ್ಚಿದ್ದರೂ ಅಭಿಮಾನಿಗಳಿಗೆ 2023 ರ ಆ ಫೈನಲ್ ಸೋಲು ಆತಂಕವನ್ನುಂಟು ಮಾಡಿದೆ. ಆದಾಗ್ಯೂ ಮೋದಿ ಮೈದಾನದಲ್ಲಿ ಭಾರತದ ದಾಖಲೆ ಉತ್ತಮವಾಗಿದ್ದು, ಟ್ರೋಫಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.
ಮೋದಿ ಮೈದಾನದಲ್ಲಿ ಭಾರತದ ಒಟ್ಟಾರೆ ಟಿ20 ದಾಖಲೆಯನ್ನು ನೋಡುವುದಾದರೆ.. ಈ ಮೈದಾನದಲ್ಲಿ ಭಾರತ ತಂಡವು ಇದುವರೆಗೆ ಒಟ್ಟು 10 ಟಿ20 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 2021 ರಿಂದ ಈ ಕ್ರೀಡಾಂಗಣದಲ್ಲಿ ಭಾರತ ತಂಡ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಜೊತೆಗೆ ಈ ಟಿ20 ವಿಶ್ವಕಪ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿವೆ.
ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡಗಳು ಎರಡರಲ್ಲಿ ಗೆದ್ದಿವೆ. ಉಳಿದಂತೆ ಒಂದು ಪಂದ್ಯ ಟೈ ಆಗಿತ್ತು. ಇನ್ನು ಈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡದ ದಾಖಲೆಯನ್ನು ನೋಡುವುದಾದರೆ.. ಎರಡು ಪಂದ್ಯಗಳನ್ನು ಆಡಿರುವ ಕಿವೀಸ್ ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಮೋದಿ ಮೈದಾನದಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾಗೆ ಅಂಕಿ ಅಂಶಗಳು ಪೂರಕವಾಗಿವೆ.
ಈ ವಿಶ್ವಕಪ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಆಡಿದೆ. ಇದರಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋತಿದೆ. ಸೂಪರ್ 8 ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಪಂದ್ಯವನ್ನಾಡಿದ್ದ ಭಾರತ, ಹೀನಾಯ ಸೋಲು ಕಂಡಿತ್ತು. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಕಳೆದ ಸೋಲಿನ ಕಹಿಯನ್ನು ಮರೆತು ಟೀಂ ಇಂಡಿಯಾ ಈ ಪಂದ್ಯಕ್ಕೀಳಿಯಬೇಕಾಗಿದೆ.
T20 World Cup 2026: ಈ ನಾಲ್ಕು ಕಾಕತಾಳೀಯಗಳು ಭಾರತವೇ ಚಾಂಪಿಯನ್ ಎನ್ನುತ್ತಿವೆ
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆಗಳ ಬಗ್ಗೆ ಹೇಳುವುದಾದರೆ.. ಈ ಎರಡು ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ದುರಾದೃಷ್ಟಕರ ಸಂಗತಿಯೆಂದರೆ ಈ ಮೂರು ಪಂದ್ಯಗಳಲ್ಲೂ ಭಾರತ ಸೋತಿದೆ. ಈ ಒಂದು ಅಂಕಿಅಂಶ ನ್ಯೂಜಿಲೆಂಡ್ ಪರವಾಗಿದ್ದರೂ, ಟೀಂ ಇಂಡಿಯಾ ಸೋಲಿನ ಸರಣಿಯನ್ನು ಮುರಿದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Sat, 7 March 26