IPL 2024: 5 ವರ್ಷಕ್ಕೆ 2500 ಕೋಟಿ! ಮತ್ತೆ ಐಪಿಎಲ್ ಟೈಟಲ್ ರೈಟ್ಸ್ ಖರೀದಿಸಿದ ಟಾಟಾ ಗ್ರೂಪ್

|

Updated on: Jan 20, 2024 | 6:43 PM

IPL 2024-28: ಟಾಟಾ ಗ್ರೂಪ್ ಮುಂದಿನ ಐದು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಮತ್ತೊಮ್ಮೆ ಖರೀದಿಸಿದೆ. ಐಪಿಎಲ್ 2024 ರಿಂದ 2028 ರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟಾಟಾ ಸನ್ಸ್ ವರ್ಷಕ್ಕೆ ರೂ 500 ಕೋಟಿ ವ್ಯಯಿಸಲಿದೆ.

IPL 2024: 5 ವರ್ಷಕ್ಕೆ 2500 ಕೋಟಿ! ಮತ್ತೆ ಐಪಿಎಲ್ ಟೈಟಲ್ ರೈಟ್ಸ್ ಖರೀದಿಸಿದ ಟಾಟಾ ಗ್ರೂಪ್
ಟಾಟಾ ಐಪಿಎಲ್
Follow us on

ಟಾಟಾ ಗ್ರೂಪ್ (TATA Group) ಮುಂದಿನ ಐದು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಮತ್ತೊಮ್ಮೆ ಖರೀದಿಸಿದೆ. ಐಪಿಎಲ್ 2024 ರಿಂದ 2028 ರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ( IPL Title Sponsor) ಟಾಟಾ ಸನ್ಸ್ ವರ್ಷಕ್ಕೆ ರೂ 500 ಕೋಟಿ ವ್ಯಯಿಸಲಿದೆ. ಅಂದರೆ ಒಟ್ಟು ಐದು ಐಪಿಎಲ್ ಆವೃತ್ತಿಗಳ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕಿಗಾಗಿ ಟಾಟಾ 2500 ಕೋಟಿ ರೂಗಳನ್ನು ಖರ್ಚು ಮಾಡಲಿದೆ. ಕಳೆದ ವರ್ಷ ಡಿಸೆಂಬರ್ 12 ರಂದು ಬಿಸಿಸಿಐ ಈ ಪ್ರಾಯೋಜಕತ್ವಕ್ಕೆ ಟೆಂಡರ್ ನೀಡಿತ್ತು. ಜನವರಿ 14 ರಂದು ಆದಿತ್ಯ ಬಿರ್ಲಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಖರೀದಿಸಲು 2500 ಕೋಟಿ ರೂಗಳನ್ನು ಬಿಡ್ ಮಾಡಿತ್ತು. ಆದರೆ ರೈಟ್ ಟು ಮ್ಯಾಚ್ ಕಾರ್ಡ್ ನಿಯಮದನ್ವಯ ಟಾಟಾ ಗ್ರೂಪ್ ಐಪಿಎಲ್ ಪ್ರಶಸ್ತಿ ಪ್ರಾಯೋಜಕತ್ವವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ರೈಟ್ ಟು ಮ್ಯಾಚ್ ಕಾರ್ಡ್ ಬಳಸಿದ ಟಾಟಾ

ವಾಸ್ತವವಾಗಿ ಆದಿತ್ಯ ಬಿರ್ಲಾ ಗ್ರೂಪ್ ಮುಂದಿನ 5 ವರ್ಷಕಗಳ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು 2500 ಕೋಟಿ ರೂಗಳನ್ನು ಬಿಡ್ ಮಾಡಿತ್ತು. ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಈ ಹಿಂದೆ ಪ್ರತಿ ಸೀಸನ್​ಗೆ 365 ಕೋಟಿ ರೂಗಳನ್ನು ಪಾವತಿಸುತ್ತಿತ್ತು. ಆದರೆ ಈ ಬಾರಿ ಪ್ರತಿ ಸೀಸನ್​ಗೆ 500 ಕೋಟಿ ರೂಗಳನ್ನು ಬಿಡ್ ಮಾಡಿದ್ದ ಆದಿತ್ಯ ಬಿರ್ಲಾ ಗ್ರೂಪ್ ಈ ಬಿಡ್ ಗೆಲ್ಲುವ ಹಂತದಲ್ಲಿತ್ತು. ಆದರೆ ಟಾಟಾ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಬಿಡ್ ಗೆದ್ದುಕೊಂಡಿತು.

ರೈಟ್ ಟು ಮ್ಯಾಚ್ ಕಾರ್ಡ್ ಐಪಿಎಲ್ ನಿಯಮಗಳಲ್ಲಿ ಒಂದಾಗಿದೆ. ಈ ನಿಯಮದ ಪ್ರಕಾರ, ಮಾಜಿ ಪ್ರಾಯೋಜಕರು ಈ ಕಾರ್ಡ್ ಅನ್ನು ಬಳಸಿಕೊಂಡು ಮತ್ತೆ ಅದರ ಹಕ್ಕನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು. ಅದರಂತೆ 2022 ಮತ್ತು 2023ರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿದ್ದ ಟಾಟಾ ಗ್ರೂಪ್, ಮತ್ತೊಮ್ಮೆ ಈ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದೇನು?

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾತನಾಡಿ, ‘ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಟಾಟಾ ಗ್ರೂಪ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಲೀಗ್ ಎಲ್ಲೆಗಳನ್ನು ಮೀರಿದೆ, ಸ್ಕಿಲ್, ಉತ್ಸಾಹ ಮತ್ತು ಮನರಂಜನೆಯ ಮಿಶ್ರಣದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಆಕರ್ಷಿಸಿದೆ. ಭಾರತ ಮೂಲದ ಟಾಟಾ ಗ್ರೂಪ್ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುವ ಮೂಲಕ ಶ್ರೇಷ್ಠತೆಯ ಸಂಕೇತವಾಗಿ ಹೊರಹೊಮ್ಮಿದೆ. ಈ ಸಹಯೋಗವು ಬೆಳವಣಿಗೆ, ನಾವೀನ್ಯತೆಗಾಗಿ ಪರಸ್ಪರ ಸಂಪರ್ಕದ ಸಂಕೇತವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:42 pm, Sat, 20 January 24