
15 ಆಗಸ್ಟ್ 2026 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯವು ಭಾರತೀಯ ಕ್ರಿಕೆಟ್ ಇತಿಹಾಸದ ಒಟ್ಟಾರೆ 600ನೇ ಟೆಸ್ಟ್ ಪಂದ್ಯವಾಗಿದೆ. ಅಂದರೆ ಇದು ಭಾರತ ಆಡುತ್ತಿರುವ 600ನೇ ಟೆಸ್ಟ್ ಪಂದ್ಯ. ಹೀಗಾಗಿಯೇ ಈ ಪಂದ್ಯವು ಇದೀಗ ಭಾರತ ತಂಡದ ಪಾಲಿನ ಐತಿಹಾಸಿಕ ಪಂದ್ಯವಾಗಿ ಮಾರ್ಪಟ್ಟಿದೆ.
ಟೀಮ್ ಇಂಡಿಯಾ ತನ್ನ ಮೊದಲ ಅಧಿಕೃತ ಟೆಸ್ಟ್ ಪಂದ್ಯವನ್ನು ಆಡಿದ್ದು 1932 ರಲ್ಲಿ ಇಂಗ್ಲೆಂಡ್ ವಿರುದ್ಧ. ಅಲ್ಲಿಂದ ಆರಂಭವಾದ ಈ ಸುದೀರ್ಘ 94 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಭಾರತೀಯ ಕ್ರಿಕೆಟ್ ಹಲವು ಏಳು-ಬೀಳುಗಳನ್ನು ಕಂಡಿದೆ.
ಸಿ.ಕೆ. ನಾಯ್ಡು ಅವರ ಮೊದಲ ನಾಯಕತ್ವದಿಂದ ಹಿಡಿದು ಇಂದಿನ ಯುವ ಪೀಳಿಗೆಯವರೆಗೆ ಒಟ್ಟು 38 ದಿಗ್ಗಜ ನಾಯಕರು ಈ ತಂಡವನ್ನು ಮುನ್ನಡೆಸಿದ್ದಾರೆ.
ಈ ಎಲ್ಲಾ 38 ನಾಯಕರ ಶ್ರಮ, ನೂರಾರು ಆಟಗಾರರ ಬೆವರು ಮತ್ತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯ ಫಲವಾಗಿ ಇಂದು ಭಾರತ ತನ್ನ 600ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿ ಬಂದು ನಿಂತಿದೆ.
ಭಾರತದ ಈ ಮಹತ್ವದ 600ನೇ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಮಹಾನ್ ಗೌರವ ಯುವ ಆಟಗಾರ ಶುಭ್‌ಮನ್ ಗಿಲ್ ಹೆಗಲಿಗೇರಿದೆ. ಕಪಿಲ್ ದೇವ್, ಎಂ.ಎಸ್. ಧೋನಿ, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿಯಂತಹ ದಿಗ್ಗಜರು ಅಲಂಕರಿಸಿದ್ದ ಸ್ಥಾನದಲ್ಲಿ ನಿಂತು ಗಿಲ್ ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ.
ಮತ್ತೊಂದೆಡೆ, ಭಾರತ ತಂಡವು ಬರೋಬ್ಬರಿ 9 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಶ್ರೀಲಂಕಾ ಮಣ್ಣಿನಲ್ಲಿ ಟೆಸ್ಟ್ ಸರಣಿ ಆಡುತ್ತಿರುವುದು, ಈ ಪಂದ್ಯದ ಮೇಲಿನ ಕುತೂಹಲ ಹಾಗೂ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: LPL ನಲ್ಲಿ ತಂಡ ಖರೀದಿಸಿದ ಝಹೀರ್ ಖಾನ್!
ಒಟ್ಟಾರೆಯಾಗಿ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದೇ ಆರಂಭವಾಗಲಿರುವ ಈ 600ನೇ ಟೆಸ್ಟ್ ಪಂದ್ಯವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲನ್ನು ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.