
ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇಂದು (ಅಕ್ಟೋಬರ್ 3, 2026) ನಿಜಕ್ಕೂ ‘ಶುಭ ಶನಿವಾರ’. ಏಕೆಂದರೆ ಇಂದು ‘ಟೀಮ್ ಇಂಡಿಯಾ‘ ಒಟ್ಟು 4 ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದೆ. ಈ ನಾಲ್ಕೂ ಪಂದ್ಯಗಳು ಬೇರೆ ಬೇರೆ ಕ್ರೀಡೆ ಹಾಗೂ ಸರಣಿಗಳಿಗೆ ಸೇರಿವೆ. ಒಂದೆಡೆ ಕ್ರಿಕೆಟ್‌ನಲ್ಲಿ ಭಾರತದ ಎರಡು ಪ್ರತ್ಯೇಕ ತಂಡಗಳು ವಿಭಿನ್ನ ದೇಶಗಳಲ್ಲಿ ಮೈದಾನಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಹಾಕಿ ಹಾಗೂ ಫುಟ್‌ಬಾಲ್‌ನಲ್ಲೂ ಟೀಮ್ ಇಂಡಿಯಾ ಬಲಿಷ್ಠ ಎದುರಾಳಿಗಳ ವಿರುದ್ಧ ಹೋರಾಡಲಿದೆ. ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಜಪಾನ್‌ನ ನಿಶ್ಶಿನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಪುರುಷರ ಟಿ20 ಕ್ರಿಕೆಟ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುತ್ತಿವೆ. ಇಡೀ ವಿಶ್ವದ ಕಣ್ಣು ಈ ಹೈ-ವೋಲ್ಟೇಜ್ ಪಂದ್ಯದ ಮೇಲಿದ್ದು, ಭಾರತ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ. ಬೆಳಗ್ಗೆ 10:00 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಮಲೇಷ್ಯಾ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಕೇವಲ ಚಿನ್ನದ ಪದಕಕ್ಕಾಗಿ ಮಾತ್ರವಲ್ಲದೆ, ಇಲ್ಲಿ ಗೆಲ್ಲುವ ತಂಡಕ್ಕೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಿಗುವುದರಿಂದ ಭಾರತಕ್ಕೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯಕ್ಕೆ ಚಾಲನೆ ಸಿಗಲಿದೆ.
ಮತ್ತೊಂದೆಡೆ, ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ.
ಭಾರತ ಮತ್ತು ಬ್ರೆಝಿಲ್ ನಡುವಿನ ಐತಿಹಾಸಿಕ ಅಂತಾರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯ ಇಂದೇ (ಶನಿವಾರ, ಅಕ್ಟೋಬರ್ 3, 2026) ನಡೆಯಲಿದೆ. ಕೋಲ್ಕತ್ತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 7:30ಕ್ಕೆ (IST) ಶುರುವಾಗಲಿದೆ.
ಇದನ್ನೂ ಓದಿ: ಜೈಸ್ವಾಲ್ vs ಅಸಿತ ಜಗಳದ ಅಸಲಿ ಕಾರಣ ಬಿಚ್ಚಿಟ್ಟ ಟೀಮ್ ಇಂಡಿಯಾ ಆಟಗಾರ
ಒಟ್ಟಾರೆಯಾ, ಒಂದೇ ದಿನ ಕ್ರಿಕೆಟ್‌ನ ಎರಡು ಹೈ-ವೋಲ್ಟೇಜ್ ಪಂದ್ಯಗಳು, ಒಲಿಂಪಿಕ್ಸ್ ಅರ್ಹತೆ ನಿರ್ಧರಿಸುವ ಹಾಕಿ ಫೈನಲ್ ಮತ್ತು ಬ್ರೆಝಿಲ್ ವಿರುದ್ಧದ ಐತಿಹಾಸಿಕ ಫುಟ್‌ಬಾಲ್ ಸಮರ—ಇಂತಹದೊಂದು ಅಪರೂಪದ ಕ್ರೀಡಾ ಹಬ್ಬಕ್ಕೆ ಭಾರತ ಸಾಕ್ಷಿಯಾಗುತ್ತಿರುವುದು ಇದೇ ಮೊದಲು. ಇಂದು ಕಣಕ್ಕಿಳಿಯಲಿರುವ ಭಾರತದ ಎಲ್ಲಾ ನಾಲ್ಕೂ ತಂಡಗಳು ವಿಜಯಶಾಲಿಯಾಗಿ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿ ಎಂಬುದೇ ಕೋಟ್ಯಂತರ ಕ್ರೀಡಾ ಪ್ರೇಮಿಗಳ ಆಶಯ.
Published On - 7:39 am, Sat, 3 October 26