IPL 2027: ರಿಟೈನ್-ರಿಲೀಸ್ ಆಟಗಾರರ ಪಟ್ಟಿ ಸಲ್ಲಿಸಲು ದಿನಾಂಕ ನಿಗದಿ

ಐಪಿಎಲ್​ನಲ್ಲಿ ಮೆಗಾ ಹರಾಜು ಇಡೀ ತಂಡದ ಚಿತ್ರಣವನ್ನೇ ಬದಲಿಸಿದರೆ, ಮಿನಿ ಹರಾಜು ತಂಡಗಳ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿದೆ. ಕೇವಲ ಒಂದು ದಿನದ ಅವಧಿಯಲ್ಲಿ ಮುಕ್ತಾಯಗೊಳ್ಳುವ ಈ ಚುಟುಕು ಹರಾಜು ಪ್ರಕ್ರಿಯೆಯು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರೂ, ಫ್ರಾಂಚೈಸಿಗಳ ಪಾಲಿಗೆ ಅತ್ಯಂತ ಲೆಕ್ಕಾಚಾರದ ವೇದಿಕೆಯಾಗಿದೆ.

IPL 2027: ರಿಟೈನ್-ರಿಲೀಸ್ ಆಟಗಾರರ ಪಟ್ಟಿ ಸಲ್ಲಿಸಲು ದಿನಾಂಕ ನಿಗದಿ
Ipl 2027
Image Credit source: IPL

Updated on: Oct 06, 2026 | 7:27 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಗಾಗಿ ಸಿದ್ಧತೆಗಳು ಆರಂಭವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಆಟಗಾರರ ರಿಟೆನ್ಷನ್​ಗೆ ಅಂತಿಮ ಗಡುವು ನಿಗದಿಯಾಗಿದೆ. ಅದರಂತೆ ಎಲ್ಲಾ ಫ್ರಾಂಚೈಸಿಗಳು ನವೆಂಬರ್ 15 ರೊಳಗೆ ತಂಡದಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಈ ರಿಟೈನ್ ಹಾಗೂ ರಿಲೀಸ್ ಪಟ್ಟಿ ಬಿಡುಗಡೆಯಾದ ಬಳಿಕ ಐಪಿಎಲ್ ಮಿನಿ ಹರಾಜಿಗಾಗಿ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.

ಗೋವಾದಲ್ಲಿ ಮಿನಿ ಹರಾಜು:

ಈ ಬಾರಿ ಐಪಿಎಲ್‌ನ ಹರಾಜು ಪ್ರಕ್ರಿಯೆಯನ್ನು ಗೋವಾದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಡಿಸೆಂಬರ್ ಎರಡನೇ ವಾರದಲ್ಲಿ (ಸಾಧ್ಯತಾ ದಿನಾಂಕಗಳು ಡಿಸೆಂಬರ್ 15-16) ಆಟಗಾರರ ಆಕ್ಷನ್ ನಡೆಯಲಿದೆ. ಈ ಹರಾಜಿನಲ್ಲಿ 300 ರಿಂದ 500 ಆಟಗಾರರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಟ್ರೇಡ್ ವಿಂಡೋಗೂ ಅವಕಾಶ:

ಇದು ಮಿನಿ ಹರಾಜು ವರ್ಷವಾಗಿರುವುದರಿಂದ, ಬಹುತೇಕ ತಂಡಗಳು ತಮ್ಮ ಪ್ರಮುಖ ಆಟಗಾರರ ಕೋರ್ ತಂಡವನ್ನು ಹಾಗೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದಾಗ್ಯೂ, ಕೆಲವು ಸ್ಟಾರ್ ಆಟಗಾರರ ಭವಿಷ್ಯ ಮತ್ತು ಟ್ರೇಡಿಂಗ್ ವಿಂಡೋ ಮೂಲಕ ಆಟಗಾರರ ಅದಲು-ಬದಲು ಪ್ರಕ್ರಿಯೆಯು ನವೆಂಬರ್ 15ರ ಗಡುವಿನೊಳಗೆ ಅಂತಿಮ ರೂಪ ಪಡೆಯಬೇಕಿದೆ.

ಟ್ರೇಡಿಂಗ್ ವಿಂಡೋ ಹರಾಜಿಗೆ ಒಂದು ವಾರ ಇರುವ ಮುನ್ನ ಮುಚ್ಚಲಿದ್ದು, ತಂಡಗಳು ತಮ್ಮ ಬಜೆಟ್ ಹಾಗೂ ಆಟಗಾರರ ಲಭ್ಯತೆಯನ್ನು ಲೆಕ್ಕಹಾಕಿ ರಿಟೆನ್ಷನ್ ಪಟ್ಟಿಯನ್ನು ಸಿದ್ಧಪಡಿಸಬೇಕಾದ ಒತ್ತಡದಲ್ಲಿವೆ. ನವೆಂಬರ್ 15ರ ನಂತರ ಯಾವ ತಂಡದಲ್ಲಿ ಯಾರು ಉಳಿಯಲಿದ್ದಾರೆ ಮತ್ತು ಯಾರು ಹರಾಜಿನ ಅಖಾಡಕ್ಕೆ ಬರಲಿದ್ದಾರೆ ಎಂಬ ಸಂಪೂರ್ಣ ಚಿತ್ರಣ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲಿದೆ.

ಏನಿದು ಮಿನಿ ಹರಾಜು?

ಮಿನಿ ಹರಾಜು ಎಂದರೆ ಸಣ್ಣ ಮಟ್ಟದ ಆಟಗಾರರ ಹರಾಜು ಪ್ರಕ್ರಿಯೆ. ಇಲ್ಲಿ ಫ್ರಾಂಚೈಸಿಗಳು ಇಂತಿಷ್ಟೇ ಆಟಗಾರರನ್ನು ಉಳಿಸಿಕೊಳ್ಳಬೇಕು ಅಥವಾ ಇಂತಿಷ್ಟೇ ಆಟಗಾರರನ್ನು ಕಡ್ಡಾಯವಾಗಿ ಬಿಡುಗಡೆ ಮಾಡಬೇಕು ಎಂಬ ಯಾವುದೇ ಕಠಿಣ ನಿಯಮಗಳಿರುವುದಿಲ್ಲ. ಆಟಗಾರರನ್ನು ತಂಡದಿಂದ ಕೈಬಿಡುವುದು ಕೂಡ ಸಂಪೂರ್ಣವಾಗಿ ಆಯಾ ಫ್ರಾಂಚೈಸಿಗಳ ನಿರ್ಧಾರಕ್ಕೆ ಬಿಟ್ಟಿದ್ದಾಗಿರುತ್ತದೆ. ಅಂದರೆ ಇಲ್ಲಿ ರಿಲೀಸ್ ಹಾಗೂ ರಿಟೈನ್​ ಕಡ್ಡಾಯವಲ್ಲ. ಹಾಗಾಗಿ, ಈ ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಿವೆ.

ಮಿನಿ ಹರಾಜಿನ ನಿಯಮಗಳೇನು?

ರಿಟೆನ್ಷನ್ ಮಿತಿ ಇರುವುದಿಲ್ಲ: ಮೆಗಾ ಹರಾಜಿನಂತೆ ಇಲ್ಲಿ ಇಷ್ಟೇ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಫ್ರಾಂಚೈಸಿಗಳು ತಮಗೆ ಅಗತ್ಯವಿದ್ದರೆ ತಮ್ಮ ಇಡೀ ತಂಡವನ್ನು ಬೇಕಿದ್ದರೂ ಉಳಿಸಿಕೊಳ್ಳಬಹುದು.

ಆರ್​ಟಿಎಂ ಇರುವುದಿಲ್ಲ: ಮಿನಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಲು ಅವಕಾಶ ಇರುವುದಿಲ್ಲ. ಏಕೆಂದರೆ ತಂಡಗಳು ಹರಾಜಿಗೂ ಮುನ್ನವೇ ತಮಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಮುಕ್ತ ಅವಕಾಶ ಹೊಂದಿರುತ್ತವೆ.

ತಂಡದ ಗಾತ್ರದ ಮಿತಿ: ಹರಾಜಿನ ನಂತರ ಪ್ರತಿ ತಂಡದಲ್ಲಿ ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರು ಇರಬೇಕು. ಇದರಲ್ಲಿ ಗರಿಷ್ಠ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ.

ಪರ್ಸ್ ಬ್ಯಾಲೆನ್ಸ್ ಮತ್ತು ಬಜೆಟ್: 2027ರ ಸೀಸನ್‌ಗಾಗಿ ಒಟ್ಟು ಸ್ಯಾಲರಿ ಕ್ಯಾಪ್ ಅನ್ನು ₹157 ಕೋಟಿಗೆ ಏರಿಸಲಾಗಿದೆ. ಮೆಗಾ ಹರಾಜಿನಲ್ಲಿ ಉಳಿದ ಹಣ, ತಂಡಗಳು ಬಿಡುಗಡೆ ಮಾಡಿದ ಆಟಗಾರರ ಒಟ್ಟು ಮೊತ್ತ ಹಾಗೂ ಬಿಸಿಸಿಐ ನೀಡುವ ಹೆಚ್ಚುವರಿ ಬಜೆಟ್ ಸೇರಿ ಆಯಾ ತಂಡದ ಹರಾಜಿನ ಪರ್ಸ್ ಮೌಲ್ಯ ನಿರ್ಧಾರವಾಗುತ್ತದೆ.

ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಳ್ಳುವಿಕೆ: ಪ್ರತಿ ಫ್ರಾಂಚೈಸಿಯು ತಮಗೆ ಅಗತ್ಯವಿರುವ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಬಹುದು.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ ನಾಲ್ವರು ಔಟ್

ಪರ್ಸ್​ ಮೊತ್ತ: ಬಿಡುಗಡೆಯಾದ ಆಟಗಾರರ ಒಟ್ಟು ಮೊತ್ತ ಮತ್ತು ಕಳೆದ ಹರಾಜಿನಲ್ಲಿ ಉಳಿದಿದ್ದ ಬಾಕಿ ಹಣವನ್ನು ಸೇರಿಸಿ ಪ್ರತಿ ತಂಡದ ಅಂತಿಮ ಪರ್ಸ್ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಈ ಹಣವನ್ನು ಬಳಸಿಕೊಂಡು ತಂಡಗಳು ತಮಗಿರುವ ಕೊರತೆಗಳನ್ನು ನೀಗಿಸಲು ಹೊಸ ಆಟಗಾರರನ್ನು ಖರೀದಿಸಲಿವೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us