ಇಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಎರಡನೇ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಪಂದ್ಯಕ್ಕೆ ಕೇವಲ ಒಂದು ದಿನದ ಮೊದಲು, ತ್ರಿವೇಂಡ್ರಂನ ಕ್ರೀಡಾಂಗಣವು ಮಳೆ ನೀರಿನಿಂದ ಕೆರೆಯಂತಾಗಿದೆ. ತುಂತುರು ಮಳೆಯಿಂದಾಗಿ ಉಭಯ ತಂಡಗಳ ಆಟಗಾರರು ಸರಿಯಾಗಿ ಅಭ್ಯಾಸ ಮಾಡಲು ಕೂಡ ಸಾಧ್ಯವಾಗಲಿಲ್ಲ. ಈರೀತಿಯ ವಾತಾವರಣವಿದ್ದರೆ ಇಂದಿನ ಪಂದ್ಯ ರದ್ದಾಗುವ ಸಾಧ್ಯತೆ ಕೂಡ ಇದೆ.
ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಮಳೆ ದೊಡ್ಡ ಸಮಸ್ಯೆ ತಂದಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ತಿರುವನಂತಪುರದಲ್ಲಿ ನಡೆಯಬೇಕಿದ್ದ ಎಲ್ಲಾ ಅಭ್ಯಾಸ ಪಂದ್ಯಗಳು ಕೂಡ ಮಳೆಯಿಂದಾಗಿ ಕೊಚ್ಚಿ ಹೋಗಿದ್ದವು. ಇದೀಗ ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯಕ್ಕೂ ಇದೇ ಸ್ಥಳದಲ್ಲಿ ಮಳೆ ದೊಡ್ಡ ತಲೆನೋವಿಗೆ ಕಾರಣವಾಗಿದೆ. ಅಕ್ಯುವೆದರ್‌ನ ಹವಾಮಾನ ಮುನ್ಸೂಚನೆಯ ಪ್ರಕಾರ, ಇಂದು ಶೇ. 25 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಂಡರ್-19 ಏಷ್ಯಾಕಪ್ಗೆ ಟೀಂ ಇಂಡಿಯಾ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್
ಇಂದು ಭಾನುವಾರ ಬೆಳಗ್ಗೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಆತಂಕವನ್ನು ಹೆಚ್ಚಿಸಿದೆ. ಆದಾಗ್ಯೂ, ಮಳೆಯ ಸಾಧ್ಯತೆ ಬೆಳಗ್ಗೆ ಮಾತ್ರ ಎನ್ನಲಾಗಿದೆ. ಪಂದ್ಯದ ಸಮಯದಲ್ಲಿ ಹವಾಮಾನ ಬದಲಾಗಲಿದ್ದು, ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಅಕ್ಯುವೆದರ್ ಮಾಹಿತಿಯ ಪ್ರಕಾರ, ಮಧ್ಯಾಹ್ನ ತುಂತುರು ಮಳೆಯ ಮುನ್ಸೂಚನೆ ಇದೆ, ಸಂಜೆಯ ಸಮಯದಲ್ಲಿ ಆಕಾಶವು ಸ್ಪಷ್ಟವಾಗಿರುತ್ತದೆ. ಆದರೆ, ಪಂದ್ಯದ ನಡುವೆ ದಿಢೀರ್ ಮಳೆ ಬರುವ ಸಾಧ್ಯತೆ ಇದೆ ಕೂಡ.
ಇನ್ನು ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬಗ್ಗೆ ನೋಡುವುದಾದರೆ, ಇಲ್ಲಿನ ವಿಕೆಟ್ ನಿಧಾನಗತಿಯ ಟ್ರ್ಯಾಕ್‌ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನಡೆದ ನಾಲ್ಕು ಅಂತರರಾಷ್ಟ್ರೀಯ ಟಿ20 ಪಂದ್ಯ ಕೂಡ ಕಡಿಮೆ ಸ್ಕೋರಿಂಗ್ನಿಂದ ಕೂಡಿದೆ. ಸರಾಸರಿ ಸ್ಕೋರ್ 114 ಆಗಿದೆ. ಪಿಚ್ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಸ್ಪಿನ್ನರ್‌ಗಳು 2 ನೇ ಟಿ 20 ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಇಲ್ಲಿನ ಪಿಚ್‌ನ ತೇವಾಂಶವು ವೇಗದ ಬೌಲರ್‌ಗಳಿಗೆ ಕೂಡ ಸಹಾಯ ಮಾಡುತ್ತದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್-ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್.
ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ XI: ಟ್ರಾವಿಸ್ ಹೆಡ್/ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಆರನ್ ಹಾರ್ಡಿ, ಮ್ಯಾಥ್ಯೂ ವೇಡ್ (ನಾಯಕ, ವಿಕೆಟ್-ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್ಮ್ ಜೇಸನ್ ಬೆಹ್ರೆಂಡಾರ್ಫ್, ಆಡಮ್ ಝಂಪಾ/ತನ್ವೀರ್ ಸಂಘ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ