ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು

T20 World Cup 2026: ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಈ ಹಿಂದೆ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದ ಶುಭ್​​ಮನ್ ಗಿಲ್ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದೆ.

ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು
Shubman Gill - Gambhir

Updated on: Dec 23, 2025 | 2:31 PM

ಟಿ20 ವಿಶ್ವಕಪ್​ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಶುಭ್​ಮನ್ ಗಿಲ್ ಕಾಣಿಸಿಕೊಂಡಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವೈಸ್ ಕ್ಯಾಪ್ಟನ್ ಆಗಿ  ಕಣಕ್ಕಿಳಿದಿದ್ದ ಗಿಲ್ ಅವರನ್ನು ಏಕಾಏಕಿ ಕೈ ಬಿಡಲು ಕಾರಣವೇನು? ಎಂಬ ಪ್ರಶ್ನೆಗೆ ಸಿಗುವ ಉತ್ತರ ಕಳಪೆ ಫಾರ್ಮ್. ಇದಾಗ್ಯೂ ಶುಭ್​ಮನ್ ಗಿಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಬಯಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.

ಕೆಲ ವರದಿಗಳ ಪ್ರಕಾರ, ಗೌತಮ್ ಗಂಭೀರ್​ ಟಿ20 ವಿಶ್ವಕಪ್​ಗೂ ಶುಭ್​ಮನ್ ಗಿಲ್ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಸಮ್ಮತಿ ವ್ಯಕ್ತಪಡಿಸಿದ್ದರು. ಇದರಿಂದ ಆಯ್ಕೆ ಸಮಿತಿ ಸದಸ್ಯರುಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿದೆ.  ಈ ಭಿನ್ನಾಭಿಪ್ರಾಯಗಳಿಂದಲೇ ಶುಭ್​ಮನ್ ಗಿಲ್ ತಂಡದಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ಆಯ್ಕೆ ಸಮಿತಿ ನಿಯಮಗಳ ಪ್ರಕಾರ, ಹೆಚ್ಚಿನ ಸಮ್ಮತಿಯನ್ನು ಮೊದಲು ಪರಿಗಣಿಸಬೇಕು. ಅಂದರೆ ಐವರು ಆಯ್ಕೆಗಾರರಲ್ಲಿ ಮೂವರು ಓರ್ವ ಆಟಗಾರನ ಪರ ಬ್ಯಾಟ್ ಬೀಸಿದರೆ ಅವರಿಗೆ ಅವಕಾಶ ನೀಡಬೇಕಾಗುತ್ತದೆ. ಶುಭ್​ಮನ್ ಗಿಲ್ ವಿಷಯದಲ್ಲಿ ಮೂವರು ಆಯ್ಕೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಅವರು ಭಾರತ ಟಿ20 ತಂಡದಿಂದ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಇಲ್ಲಿ ಮುಖ್ಯವಾಗಿ ಆಯ್ಕೆ ಸಮಿತಿ ಸದಸ್ಯರುಗಳಾದ ಆರ್​ಪಿ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಶುಭ್​ಮನ್ ಗಿಲ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ದೇಶೀಯ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಆಯ್ಕೆಗೆ ಹೆಚ್ಚಿನ ಒಲವು ತೋರಿದ್ದಾರೆ.

ಆರ್​ಪಿ ಸಿಂಗ್ ಹಾಗೂ ಓಜಾ ಅವರ ನಿಲುವಿಗೆ ಮತ್ತೋರ್ವ ಆಯ್ಕೆ ಸಮಿತಿ ಸದಸ್ಯ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಐವರಲ್ಲಿ ಮೂರು ಗಿಲ್ ಆಯ್ಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರಿಂದಾಗಿ ಕೈ ಬಿಡಲೇಬೇಕಾಯಿತು. ಇದರಿಂದಾಗಿ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್​ಗೆ ಹಿನ್ನಡೆಯಾಗಿದೆ.

ಅತ್ತ ಆರ್​ಪಿ ಸಿಂಗ್, ಪ್ರಗ್ಯಾನ್ ಓಜಾ ಹಾಗೂ ಮತ್ತೋರ್ವ ಆಯ್ಕೆ ಸಮಿತಿ ಸದಸ್ಯ ಗಿಲ್ ಅವರನ್ನು ಕೈ ಬಿಟ್ಟು ಪ್ರಸ್ತುತ ಫಾರ್ಮ್​ನಲ್ಲಿರುವ ಆಟಗಾರನಿಗೆ ಅವಕಾಶ ಕಲ್ಪಿಸಬೇಕೆಂಬ ನಿರ್ಧಾರಕ್ಕೆ ಬದ್ಧರಾಗಿದ್ದರಿಂದ ಇಶಾನ್ ಕಿಶನ್​ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಲಭಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿಜಯ ಹಝಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಅಂಕಿ ಅಂಶಗಳು ಹೇಗಿದೆ?

ಇದರಿಂದ ಕಳಪೆ ಫಾರ್ಮ್​ ಹೊರತಾಗಿಯೂ ಶುಭ್​ಮನ್ ಗಿಲ್​ ಅವರನ್ನು ನ್ಯೂಝಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲು ಬಯಸಿದ ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ಗೆ ಹಿನ್ನಡೆಯಾಗಿದೆ.  ಇದಾಗ್ಯೂ ಶುಭ್​ಮನ್ ಗಿಲ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಸರಣಿಯು ಜನವರಿ 11 ರಿಂದ ಶುರುವಾಗಲಿದ್ದು, ಈ ಸರಣಿಗಾಗಿ ಈ ತಿಂಗಳಾಂತ್ಯದೊಳಗೆ ತಂಡ ಪ್ರಕಟವಾಗುವ ಸಾಧ್ಯತೆಯಿದೆ.