
ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ. ಈ ರೋಚಕ ಗೆಲುವಿನ ಬೆನ್ನಲ್ಲೇ, ಪಂದ್ಯದ ಹೀರೊ ತಿಲಕ್ ವರ್ಮಾ ತಮ್ಮ ಮ್ಯಾಚ್-ವಿನ್ನಿಂಗ್ ಪ್ರದರ್ಶನದ ಹಿಂದಿನ ಅಸಲಿ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
181 ರನ್‌ಗಳ ಗುರಿ ಬೆನ್ನಟ್ಟುವಾಗ ಭಾರತ ತಂಡ 11ನೇ ಓವರ್‌ನಲ್ಲಿ ಕೇವಲ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ನಿಧಾನಗತಿಯ ಪಿಚ್‌ನಲ್ಲಿ ರನ್ ಗಳಿಸುವುದು ಕಷ್ಟವಾಗಿದ್ದರೂ, ತಿಲಕ್ ವರ್ಮಾ ಯಾವುದೇ ಅನಗತ್ಯ ರಿಸ್ಕ್ ತೆಗೆದುಕೊಳ್ಳದೆ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಲು ನಿರ್ಧರಿಸಿದ್ದರು.
ಈ ಬಗ್ಗೆ ಮಾತನಾಡಿದ ತಿಲಕ್ ವರ್ಮಾ, “ಪಂದ್ಯಕ್ಕೂ ಮುನ್ನ ನಾನು ಗೌತಮ್ ಗಂಭೀರ್ ಸರ್ ಮತ್ತು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸರ್‌ಗೆ ಒಂದು ಮಾತು ಕೊಟ್ಟಿದ್ದೆ. ಎಷ್ಟೇ ಒತ್ತಡ ಬಂದರೂ ವಿಕೆಟ್ ಚೆಲ್ಲದೆ, ಪಂದ್ಯವನ್ನು ಕೊನೆಯವರೆಗೆ ಕೊಂಡೊಯ್ದು ಗೆಲ್ಲಿಸಿಕೊಡುವುದಾಗಿ ಹೇಳಿದ್ದೆ. ಅವರೂ ಕೂಡ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು” ಎಂದು ತಿಳಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಕೋಚಿಂಗ್ ಸಿಬ್ಬಂದಿ ನೀಡಿದ ಧೈರ್ಯವೇ ತಮಗೆ ದಾರಿದೀಪವಾಯಿತು ಎಂದಿರುವ ತಿಲಕ್ ವರ್ಮಾ, ಕೋಚ್‌ಗಳ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ: “ಇಡೀ ಭಾರತವೇ ನಿನ್ನನ್ನು ನಂಬುತ್ತದೆ. ನೀನು ಕ್ರೀಸ್‌ನಲ್ಲಿ ಕೊನೆಯವರೆಗೂ ಉಳಿದರೆ ಖಂಡಿತ ಪಂದ್ಯವನ್ನು ಗೆಲ್ಲಿಸುತ್ತೀಯಾ” ಎಂದು ಗಂಭೀರ್ ಮತ್ತು ಕೋಟಕ್ ತಮಗೆ ಧೈರ್ಯ ತುಂಬಿದ್ದಾಗಿ ವರ್ಮಾ ಹೇಳಿದ್ದಾರೆ.
ಕ್ರೀಸ್‌ನ ಇನ್ನೊಂದು ತುದಿಯಲ್ಲಿದ್ದ ನಮನ್ ಧೀರ್ ಆಕ್ರಮಣಕಾರಿ ಆಟ ಆಡುತ್ತಿದ್ದಾಗ, ತಿಲಕ್ ವರ್ಮಾ ತಮ್ಮ ಸಿಕ್ಸರ್ ಹೊಡೆಯುವ ಹಸಿವನ್ನು ನಿಯಂತ್ರಿಸಿಕೊಂಡರು. ಸ್ಪಿನ್ನರ್‌ಗಳ ವಿರುದ್ಧ ರಿಸ್ಕ್ ತೆಗೆದುಕೊಳ್ಳದೆ ಸಿಂಗಲ್ಸ್ ಓಡಿ ಸ್ಟ್ರೈಕ್ ರೊಟೇಟ್ ಮಾಡುವುದರತ್ತ ಗಮನ ಹರಿಸಿದರು.
ಅಂತಿಮವಾಗಿ ಕೇವಲ 26 ಎಸೆತಗಳಲ್ಲಿ ಅಜೇಯ 51 ರನ್ ಚಚ್ಚಿದ ತಿಲಕ್ ವರ್ಮಾ ಸಿಡಿಲಬ್ಬರದ ಅರ್ಧಶತಕ ಪೂರೈಸಿದರು. ನಿತೀಶ್ ಕುಮಾರ್ ರೆಡ್ಡಿ (13 ಎಸೆತಗಳಲ್ಲಿ 26*) ಜೊತೆಗೂಡಿ ಕೇವಲ 30 ಎಸೆತಗಳಲ್ಲಿ ಅಜೇಯ 69 ರನ್‌ಗಳ ಜೊತೆಯಾಟವಾಡಿ, ಇನ್ನು ಒಂದು ಎಸೆತ ಬಾಕಿ ಇರುವಂತೆಯೇ ಭಾರತಕ್ಕೆ ವಿಜಯಲಕ್ಷ್ಮಿ ಒಲಿಸಿದರು.
ಈ ಗೆಲುವಿನೊಂದಿಗೆ ತಿಲಕ್ ವರ್ಮಾ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅಂದರೆ ಟಿ20 ಕ್ರಿಕೆಟ್‌ನಲ್ಲಿ ಅವರು ಇದುವರೆಗೆ ಚೇಸಿಂಗ್ ವೇಳೆ ಅಜೇಯರಾಗಿ ಉಳಿದ 26 ಪಂದ್ಯಗಳಲ್ಲೂ ತಂಡ (ಭಾರತ/ಐಪಿಎಲ್) ನೂರಕ್ಕೆ ನೂರರಷ್ಟು ಗೆಲುವು ಸಾಧಿಸಿದೆ. ಹೀಗಾಗಿ ತಿಲಕ್ ವರ್ಮಾರನ್ನು ಹೊಸ ಚೇಸಿಂಗ್ ಮಾಸ್ಟರ್ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: RCB ತಂಡವನ್ನು ಹಾಡಿಹೊಗಳಿದ ಮಹೇಂದ್ರ ಸಿಂಗ್ ಧೋನಿ
ಒಟ್ಟಿನಲ್ಲಿ, ಒತ್ತಡದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಕೋಚ್‌ಗಳ ಮಾರ್ಗದರ್ಶನವನ್ನು ಅಚ್ಚುಕಟ್ಟಾಗಿ ಪಾಲಿಸಿದ ತಿಲಕ್ ವರ್ಮಾ, ಕೇವಲ ರನ್ ಗಳಿಸಲಿಲ್ಲ. ಬದಲಿಗೆ ಭಾರತೀಯ ಕ್ರಿಕೆಟ್‌ನ ಮುಂದಿನ ನಂಬಿಕಸ್ಥ ‘ಫಿನಿಷರ್’ ತಾನೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.