
ಅಂಡರ್-19 ವಿಶ್ವಕಪ್ನ ಮೊದಲ ಸುತ್ತಿನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೇ ನ್ಯೂಝಿಲೆಂಡ್ ತಂಡವು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಕೇಳಲು ಅಚ್ಚರಿ ಎನಿಸಿದರೂ ಇಂತಹದೊಂದು ಫಲಿತಾಂಶಕ್ಕೆ ಕಿರಿಯರ ವಿಶ್ವಕಪ್ ಪಾಯಿಂಟ್ಸ್ ಟೇಬಲ್ ಸಾಕ್ಷಿಯಾಗಿದೆ.
ಈ ಟೂರ್ನಿಯಲ್ಲಿ ಗ್ರೂಪ್-ಬಿ ನಲ್ಲಿ ಕಣಕ್ಕಿಳಿದಿದ್ದ ನ್ಯೂಝಿಲೆಂಡ್ ತಂಡದ ಮೊದಲೆರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಇನ್ನು ಮೂರನೇ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್ಗಳಿಂದ ಸೋಲನುಭವಿಸಿದ್ದರು.
ಅಂದರೆ ಮೂರು ಪಂದ್ಯಗಳಿಂದ ನ್ಯೂಝಿಲೆಂಡ್ಗೆ ಸಿಕ್ಕಿರುವುದು ಕೇವಲ 2 ಅಂಕಗಳು ಮಾತ್ರ. ಅದು ಕೂಡ ರದ್ದಾದ ಪಂದ್ಯಗಳಿಂದ. ಆದರೆ ಇತ್ತ ಯುಎಸ್ಎ ತಂಡವು ಆಡಿದ ಮೂರು ಪಂದ್ಯಗಳಿಂದ ಕೇವಲ 1 ಅಂಕ ಪಡೆಯಲಷ್ಟೇ ಶಕ್ತರಾಗಿದ್ದಾರೆ.
ಪರಿಣಾಮ ನ್ಯೂಝಿಲೆಂಡ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಈ ಮೂರನೇ ಸ್ಥಾನದೊಂದಿಗೆ ಕಿವೀಸ್ ಪಡೆ ಸೂಪರ್-6 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಸೂಪರ್ ಸಿಕ್ಸ್ ಹಂತದಲ್ಲಿ ನ್ಯೂಝಿಲೆಂಡ್ ತಂಡವು ಗ್ರೂಪ್-2 ನಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಂತೆ ದ್ವಿತೀಯ ಸುತ್ತಿನಲ್ಲಿ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.
ಈ ಎರಡು ಪಂದ್ಯಗಳಲ್ಲಿ ನ್ಯೂಝಿಲೆಂಡ್ ತಂಡ ಜಯ ಸಾಧಿಸಿ ಗ್ರೂಪ್-2 ಅಂಕ ಪಟ್ಟಿಯಲ್ಲಿ ಟಾಪ್-2 ನಲ್ಲಿ ಸ್ಥಾನ ಪಡೆದರೆ ಸೆಮಿಫೈನಲ್ಗೇರಬಹುದು.
ಹೀಗಾಗಿ ಸೂಪರ್-6 ಸುತ್ತಿನ ಎರಡೂ ಪಂದ್ಯಗಳು ನ್ಯೂಝಿಲೆಂಡ್ ತಂಡದ ಪಾಲಿಗೆ ನಿರ್ಣಾಯಕ. ಒಂದು ವೇಳೆ ಕಿವೀಸ್ ಪಡೆ ಸೂಪರ್-6 ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ಗೇರಿದರೆ, ಮೊದಲ ಸುತ್ತಿನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೆ ನಾಕೌಟ್ ಹಂತಕ್ಕೇರಿದ ತಂಡ ಎನಿಸಿಕೊಳ್ಳಲಿದೆ.
ಅಷ್ಟೇ ಅಲ್ಲದೆ ಫೈನಲ್ಗೇರಿದೆ ಮೊದಲ ಮೂರು ಪಂದ್ಯಗಳಲ್ಲಿ ಜಯದ ಖಾತೆ ತೆರೆಯದೇ ಅಂತಿಮ ಹಂತಕ್ಕೇರಿದ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಹೀಗಾಗಿ ಇದೀಗ ನ್ಯೂಝಿಲೆಂಡ್ ತಂಡದ ಮುಂದಿನ ಪಂದ್ಯಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತ್ರಿ ಸೆಂಚುರಿ… ಸರ್ಫರಾಝ್ ಖಾನ್ ವಿಶ್ವ ದಾಖಲೆ
ಅದರಂತೆ ಪಾಕಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳಿಗೆ ಸೋಲುಣಿಸಿ ನ್ಯೂಝಿಲೆಂಡ್ ತಂಡವು ಈ ಬಾರಿಯ ಅಂಡರ್-19 ವಿಶ್ವಕಪ್ನಲ್ಲಿ ಸೆಮಿಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.