ಕ್ರಿಕೆಟ್‌ನಿಂದ ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ!

ಇಂಟರ್​ನ್ಯಾಷನಲ್​ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಳೆದಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಅಮೆರಿಕದ ಆಫ್-ಸ್ಪಿನ್ನರ್ ಬೋಡುಗುಮ್ ಅಖಿಲೇಶ್ ರೆಡ್ಡಿ ಅವರಿಗೆ ಭಾರಿ ಶಾಕ್ ನೀಡಿದೆ. ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಹಾಗೂ ತನಿಖೆಗೆ ಅಡ್ಡಿಪಡಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅಖಿಲೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಕ್ರಿಕೆಟ್‌ನಿಂದ ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ!
Akhilesh Reddy
Image Credit source: GettyImages

Updated on: Aug 04, 2026 | 8:39 AM

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭ್ರಷ್ಟಾಚಾರ ನಿರೋಧಕ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್ (USA) ತಂಡದ ಆಫ್-ಸ್ಪಿನ್ನರ್ ಬೋಡುಗುಮ್ ಅಖಿಲೇಶ್ ರೆಡ್ಡಿ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಎಂಟು ವರ್ಷಗಳ ಕಾಲ ಕಠಿಣ ನಿಷೇಧ ಹೇರಿದೆ.

ನಿಷೇಧಕ್ಕೆ ಕಾರಣವೇನು?

2025ರಲ್ಲಿ ನಡೆದ ಅಬುಧಾಬಿ ಟಿ10 ಟೂರ್ನಿಯಲ್ಲಿ ಅಖಿಲೇಶ್ ರೆಡ್ಡಿ ‘ಆಸ್ಪಿನ್ ಸ್ಟಾಲಿಯನ್ಸ್’ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ಅವರು ತನ್ನದೇ ತಂಡದ ಸಹ ಆಟಗಾರನೊಬ್ಬನನ್ನು ಭೇಟಿಯಾಗಿ, ಬೌಲಿಂಗ್ ಮಾಡುವಾಗ ಉದ್ದೇಶಪೂರ್ವಕವಾಗಿ ಹೆಚ್ಚು ರನ್ ಬಿಟ್ಟುಕೊಡುವಂತೆ (ಫಿಕ್ಸಿಂಗ್) ಪ್ರಚೋದಿಸಿದ್ದರು. ಆದರೆ ಆ ಆಟಗಾರ ಇದಕ್ಕೆ ಒಪ್ಪದೆ ತಕ್ಷಣವೇ ಭ್ರಷ್ಟಾಚಾರ ನಿರೋಧಕ ಅಧಿಕಾರಿಗೆ ದೂರು ನೀಡಿದ್ದರು.

ತನಿಖೆ ಆರಂಭವಾಗುತ್ತಿದ್ದಂತೆ ಅಖಿಲೇಶ್ ರೆಡ್ಡಿ ಅವರು ತಮ್ಮ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಸಂದೇಶಗಳು ಹಾಗೂ ಅಗತ್ಯ ದಾಖಲೆಗಳನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಹೀಗಾಗಿ ಅವರ ವಿರುದ್ಧ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರದ ಆರೋಪದಡಿಯಲ್ಲಿ ತನಿಖೆ ಆರಂಭಿಸಿತ್ತು.

ಐಸಿಸಿ ಟ್ರಿಬ್ಯುನಲ್ ತೀರ್ಪು:

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಆಂಟಿ-ಕರಪ್ಷನ್ ಕೋಡ್ ಅಡಿಯಲ್ಲಿ ಸ್ವತಂತ್ರ ನ್ಯಾಯಮಂಡಳಿಯು ವಿಚಾರಣೆ ನಡೆಸಿ ಅಖಿಲೇಶ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದೆ. ಅವರ ಮೇಲಿದ್ದ ಪ್ರಮುಖ ಮೂರು ಆರೋಪಗಳು ಸಾಬೀತಾಗಿವೆ.

  • ನಿಯಮ 2.1.1: ಪಂದ್ಯದ ಫಲಿತಾಂಶ ಅಥವಾ ಪ್ರಗತಿಯನ್ನು ಅಸಹಜವಾಗಿ ಬದಲಾಯಿಸಲು ಪ್ರಯತ್ನಿಸಿದ್ದು.
  • ನಿಯಮ 2.1.4: ಮತ್ತೊಬ್ಬ ಆಟಗಾರನನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರೇರೇಪಿಸಿದ್ದು ಅಥವಾ ಆಮಿಷ ಒಡ್ಡಿದ್ದು.
  • ನಿಯಮ 2.4.7: ತನಿಖೆಗೆ ಸಹಕರಿಸದೆ ಫೋನ್ ಡೇಟಾ ಡಿಲೀಟ್ ಮಾಡಿ ಅಡ್ಡಿಪಡಿಸಿದ್ದು.

ಯಾವಾಗಿನಿಂದ ನಿಷೇಧ ಜಾರಿ?

ಅಖಿಲೇಶ್ ರೆಡ್ಡಿ ಅವರನ್ನು ನವೆಂಬರ್ 21, 2025 ರಂದೇ ತಾತ್ಕಾಲಿಕ ಅಮಾನತ್ತಿನಲ್ಲಿಡಲಾಗಿತ್ತು. ಹೀಗಾಗಿ ಈ 8 ವರ್ಷಗಳ ನಿಷೇಧದ ಅವಧಿಯು ಅದೇ ದಿನಾಂಕದಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ 7 ಆಟಗಾರರು ಗಾಯಾಳು!

26 ವರ್ಷದ ಅಖಿಲೇಶ್ ರೆಡ್ಡಿ ಏಪ್ರಿಲ್ 2025 ರಲ್ಲಿ ಕೇಮನ್ ಐಲ್ಯಾಂಡ್ಸ್ ವಿರುದ್ಧ ಆಡುವ ಮೂಲಕ ಯುಎಸ್ಎ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಒಟ್ಟು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಐಸಿಸಿ ವಿಧಿಸಿರುವ ಈ ಕಠಿಣ ಶಿಕ್ಷೆಯು ಜಾಗತಿಕ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂಬ ಖಡಕ್ ಸಂದೇಶವನ್ನು ರವಾನಿಸಿದೆ.

 

Loading...
Unable to load recommendations.
Follow Us