
ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ 2ನೇ ಟಿ20 ಪಂದ್ಯ ಇಂದು (ಅ.24) ನಡೆಯಲಿದೆ. ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳುವುದು ಖಚಿತ. ಏಕೆಂದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಗಾಯಗೊಂಡಿದ್ದು, ಹೀಗಾಗಿ ದ್ವಿತೀಯ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೀಗ ಅವರ ಬದಲಿಗೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.
ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಆಟಗಾರ. ಆದರೆ ಕಳೆದ ಪಂದ್ಯದಲ್ಲಿ ಅವರ ಗಾಯದ ತೀವ್ರತೆಯ ಕಾರಣದಿಂದಾಗಿ ತಿಲಕ್ ವರ್ಮಾ ಅವರನ್ನು ನಂ.3 ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಇದೀಗ 2ನೇ ಪಂದ್ಯಕ್ಕಾಗಿ ಮೂರನೇ ಕ್ರಮಾಂಕಕ್ಕೆ ಅಥವಾ ಮಧ್ಯಮ ಕ್ರಮಾಂಕಕ್ಕೆ ಒಬ್ಬ ಸ್ಪೆಷಲಿಸ್ಟ್ ಬ್ಯಾಟರ್ ಅನ್ನು ಆಯ್ಕೆ ಮಾಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದೆ. ಇದರ ಜೊತೆಗೆ ಹೆಚ್ಚುವರಿ ಬೌಲರ್ ಒಬ್ಬರನ್ನು ಆಡಿಸುವ ಪರ್ಯಾಯ ಆಯ್ಕೆ ಕೂಡ ತಂಡದ ಮುಂದಿದೆ. ಹೀಗಾಗಿ ಇಂದು ಯಾರಿಗೆ ಚಾನ್ಸ್ ಸಿಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ಅವಕಾಶಕ್ಕಾಗಿ ಕಾಯುತ್ತಿರುವ ಪ್ರಮುಖ ರೇಸ್‌ನಲ್ಲಿರುವ ಆಟಗಾರರೆಂದರೆ…
ವೈಭವ್ ಸೂರ್ಯವಂಶಿ: 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಸದ್ಯ ಇಶಾನ್ ಕಿಶನ್ ಸ್ಥಾನ ತುಂಬಲು ಅತ್ಯಂತ ಪ್ರಮುಖ ಹಾಗೂ ನೇರ ಸ್ಪರ್ಧಿಯಾಗಿದ್ದಾರೆ. ಕಳೆದ ಒಂಬತ್ತು ಪಂದ್ಯಗಳಿಂದ ಬೆಂಚ್ ಕಾಯುತ್ತಿರುವ ಈ ಎಡಗೈ ಓಪನರ್‌ನನ್ನು ಕಿವೀಸ್ ನೆಲದಲ್ಲಿ ಅಂಗಳಕ್ಕಿಳಿಸಲು ಮ್ಯಾನೇಜ್‌ಮೆಂಟ್ ಒಲವು ತೋರಿದೆ. ಸೂರ್ಯವಂಶಿ ತಂಡಕ್ಕೆ ಬಂದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಬೇಕಾಗುವುದಿಲ್ಲ. ಅವರು ನೇರವಾಗಿ ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಬಹುದು ಅಥವಾ ಸಂಜು ಸ್ಯಾಮ್ಸನ್ ಆರಂಭಿಕನಾಗಿ ಮುಂದುವರಿದರೆ ಒನ್-ಡೌನ್ (ನಂ. 3) ಸ್ಥಾನದಲ್ಲಿ ಆಡಬಹುದು.
ವರುಣ್ ಚಕ್ರವರ್ತಿ: ಭಾರತ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಆಡುವ ಬಳಗಕ್ಕೆ ಸೇರಿಕೊಳ್ಳಬಹುದು. ಹ್ಯಾಗ್ಲಿ ಓವಲ್‌ನ ಪಿಚ್‌ನಲ್ಲಿ ಹೆಚ್ಚುವರಿ ಬೌನ್ಸ್ ಲಭ್ಯವಿದ್ದರೆ, ಕಿವೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಇಬ್ಬರು ಸ್ಪಿನ್ನರ್‌ಗಳ ತಂತ್ರಗಾರಿಕೆಯೊಂದಿಗೆ ಭಾರತ ಕಣಕ್ಕಿಳಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ವರುಣ್ ಚಕ್ರವರ್ತಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಶಿವಂ ದುಬೆ: ಹೆಚ್ಚುವರಿ ವೇಗದ ಬೌಲಿಂಗ್ ಆಲ್ ರೌಂಡರ್ ಆಯ್ಕೆ ಬೇಕೆಂದು ನಾಯಕ ಶ್ರೇಯಸ್ ಅಯ್ಯರ್ ಬಯಸಿದರೆ ಶಿವಂ ದುಬೆ ರೇಸ್‌ಗೆ ಬರಲಿದ್ದಾರೆ. ದುಬೆ ಮಧ್ಯಮ ಕ್ರಮಾಂಕಕ್ಕೆ ಭಾರಿ ಬಿಗ್-ಹಿಟ್ಟಿಂಗ್ ಶಕ್ತಿ ತುಂಬಬಲ್ಲರು. ಅಂದರೆ ಇಲ್ಲಿ ತಿಲಕ್ ವರ್ಮಾ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಶಿವಂ ದುಬೆ ಅವರನ್ನು ಲೋವರ್-ಮಿಡಲ್ ಆರ್ಡರ್ ಆಡಿಸುವ ಆಯ್ಕೆ ಟೀಮ್ ಇಂಡಿಯಾ ಮುಂದಿದೆ.
ಇದನ್ನೂ ಓದಿ: ನಿರ್ಧಾರ ಬದಲಿಸಿದ ಟಿಮ್ ಡೇವಿಡ್: ಹೊಸ ತಂಡದ ಪರ ಕಣಕ್ಕೆ!
ಒಟ್ಟಾರೆಯಾಗಿ ಹೇಳುವುದಾದರೆ, ಇಶಾನ್ ಕಿಶನ್ ಅವರ ಅಲಭ್ಯತೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಸವಾಲನ್ನು ತಂದೊಡ್ಡಿದ್ದರೂ, ಮತ್ತೊಂದೆಡೆ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ನಿರೂಪಿಸಲು ಭರ್ಜರಿ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದೆ. ಹೆಡ್ ಕೋಚ್ ಗೌತಮ್ ಗಂಭೀರ್ ಬ್ಯಾಟಿಂಗ್ ಬ್ಯಾಕಪ್ ಆಗಿ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಆದ್ಯತೆ ನೀಡುತ್ತಾರೋ, ಅಥವಾ ಸ್ಪಿನ್ ಬೌಲಿಂಗ್ ಬಲಪಡಿಸಲು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಮಣೆ ಹಾಕುತ್ತಾರೋ, ಇಲ್ಲ ಆಲ್ರೌಂಡರ್ ಆಗಿ ದುಬೆಯನ್ನು ಕಣಕ್ಕಿಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.