
2026ರ ಪುರುಷರ ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ, ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅವರನ್ನು ಶ್ಲಾಘಿಸಿ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಸ್ಟೋರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರ್ಯವೀರ್ ಸೆಹ್ವಾಗ್ ಅಗ್ರಸ್ಥಾನದಲ್ಲಿರುವ ಟಿವಿ ದೃಶ್ಯದ ಫೋಟೋವನ್ನು ವೈಭವ್ ಸೂರ್ಯವಂಶಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಆರ್ಯವೀರ್ ಅವರನ್ನು ಟ್ಯಾಗ್ ಮಾಡಿ “Star boiiiiii” (ಸ್ಟಾರ್ ಬೊಯ್) ಎಂದು ಕೇವಲ ಎರಡು ಪದಗಳಲ್ಲಿ ಕ್ಯಾಪ್ಷನ್ ನೀಡಿದ್ದಾರೆ.
ಇದರ ಜೊತೆಗೆ, ಭಾರತ ತಂಡವು ಗೆಲುವಿನ ರನ್ ಬಾರಿಸಿದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ವೈಭವ್, “ಅಭಿನಂದನೆಗಳು, ಓಹ್ ಮ್ಯಾನ್… ಎಂತಹ ಅದ್ಭುತ ಪಂದ್ಯವಿದು!” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ವೈಭವ್ ಸೂರ್ಯವಂಶಿ ಅವರು ಅಂದು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಬಿಹಾರ ತಂಡವನ್ನು ಮುನ್ನಡೆಸಿದ ನಂತರ, ಒಮಾನ್ನಲ್ಲಿ ನಡೆದ ಈ ಫೈನಲ್ ಪಂದ್ಯವನ್ನು ವೀಕ್ಷಿಸಿ ತಂಡವನ್ನು ಹುರಿದುಂಬಿಸಿದ್ದಾರೆ.

ವೈಭವ್ ಸೂರ್ಯವಂಶಿ ಪೋಸ್ಟ್
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶನಿವಾರ (ನವೆಂಬರ್ 14) ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ 338 ರನ್ಗಳ ಬೃಹತ್ ಗುರಿಯನ್ನು ಭಾರತ ಕೊನೆಯ ಎಸೆತದಲ್ಲಿ ತಲುಪುವ ಮೂಲಕ ರೋಚಕ ಜಯ ಸಾಧಿಸಿತು. ಆರ್ಯವೀರ್ ಅವರ ಅರ್ಧಶತಕದ ಬಳಿಕ ನಾಯಕ ಲಕ್ಷ್ಯ ರೈಚಂದಾನಿ (80 ರನ್) ಜವಾಬ್ದಾರಿಯುತ ಆಟವಾಡಿದರು. ಅಂತಿಮ ಹಂತದಲ್ಲಿ ಮೋಹಿತ್ ಉಲ್ವಾ (49) ಮತ್ತು ಮನಲ್ ಚೌಹಾಣ್ (47) ಅವರ ನಿರ್ಣಾಯಕ ಆಟದ ನೆರವಿನಿಂದ ಭಾರತ ದಾಖಲೆಯ 9ನೇ ಬಾರಿಗೆ U19 ಏಷ್ಯಾ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
Published On - 9:10 am, Sun, 15 November 26