ಸಿಡಿಲಮರಿ ಎಂಟ್ರಿ: ಮೊದಲ ಪಂದ್ಯದಲ್ಲೇ ಆರ್ಯವೀರ್ ಸೆಹ್ವಾಗ್ ಆರ್ಭಟ
Aryavir Sehwag: ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆರಂಭಿಕನಾಗಿ ಆರ್ಯವೀರ್ ಸೆಹ್ವಾಗ್ ಹಾಗೂ ಕೌಶಲ್ ಸುಮನ್ ಕಣಕ್ಕಿಳಿದಿದ್ದರು. 11 ಎಸೆತಗಳಲ್ಲಿ 9 ರನ್ಗಳಿಸಿ ಕೌಶಲ್ ಔಟಾದರೆ, ಮತ್ತೊಂದೆಡೆ ಆರ್ಯವೀರ್ ಅನುಭವಿ ಬೌಲರ್ಗಳ ಮುಂದೆ ಆರ್ಭಟಿಸಿದರು. ಅದರಲ್ಲೂ ಟೀಮ್ ಇಂಡಿಯಾ ವೇಗಿ ನವದೀಪ್ ಸೈನಿ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿ ಗಮನ ಸೆಳೆದರು.
ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಸುಪುತ್ರ ಆರ್ಯವೀರ್ ಸೆಹ್ವಾಗ್ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಚೊಚ್ಚಲ ಪಂದ್ಯವಾಡಿರುವ ಆರ್ಯವೀರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಹಾಗೂ ಈಸ್ಟ್ ಡೆಲ್ಲಿ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಈಸ್ಟ್ ಡೆಲ್ಲಿ ರೈಡರ್ಸ್ ತಂಡದ ನಾಯಕ ಅನೂಜ್ ರಾವತ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆರಂಭಿಕನಾಗಿ ಆರ್ಯವೀರ್ ಸೆಹ್ವಾಗ್ ಹಾಗೂ ಕೌಶಲ್ ಸುಮನ್ ಕಣಕ್ಕಿಳಿದಿದ್ದರು. 11 ಎಸೆತಗಳಲ್ಲಿ 9 ರನ್ಗಳಿಸಿ ಕೌಶಲ್ ಔಟಾದರೆ, ಮತ್ತೊಂದೆಡೆ ಆರ್ಯವೀರ್ ಅನುಭವಿ ಬೌಲರ್ಗಳ ಮುಂದೆ ಆರ್ಭಟಿಸಿದರು. ಅದರಲ್ಲೂ ಟೀಮ್ ಇಂಡಿಯಾ ವೇಗಿ ನವದೀಪ್ ಸೈನಿ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿ ಗಮನ ಸೆಳೆದರು.
ಚೊಚ್ಚಲ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಆರ್ಯವೀರ್ ಸೆಹ್ವಾಗ್ 16 ಎಸೆತಗಳನ್ನು ಎದುರಿಸಿ 4 ಫೋರ್ಗಳೊಂದಿಗೆ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಈ ಪಂದ್ಯದಲ್ಲಿ ಯುಗಲ್ ಸೈನಿ ಬಾರಿಸಿದ 52 ರನ್ಗಳ ನೆರವಿನೊಂದಿಗೆ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು.
156 ರನ್ಗಳ ಗುರಿ ಬೆನ್ನತ್ತಿದ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಮೋನಿ ಗ್ರೆವಾಲ್ ಅವರ ಮಾರಕ ದಾಳಿಗೆ ತತ್ತರಿಸಿತು. 4 ಓವರ್ ಎಸೆದ ಮೋನಿ ಗ್ರೆವಾಲ್ ಹ್ಯಾಟ್ರಿಕ್ ವಿಕೆಟ್ನೊಂದಿಗೆ ಕೇವಲ 23 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪರಿಣಾಮ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 16 ಓವರ್ಗಳಲ್ಲಿ 93 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 62 ರನ್ಗಳ ಭರ್ಜರಿ ಜಯ ಸಾಧಿಸಿದೆ.

