
2025 ರ (Irani Cup) ಇರಾನಿ ಕಪ್ ಪಂದ್ಯವು ರಣಜಿ ಟ್ರೋಫಿ ಚಾಂಪಿಯನ್ ವಿದರ್ಭ ಮತ್ತು ರೆಸ್ಟ್ ಆಫ್ ಇಂಡಿಯಾ (Vidarbha vs Rest of India) ನಡುವೆ ನಡೆಯಿತು. ನಾಪಗೂರ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿದರ್ಭ ತಂಡವು ಜಯಶಾಲಿಯಾಗಿ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿದರ್ಭ ತಂಡವು ಈ ಹಿಂದೆ 2017-18 ಮತ್ತು 2018-19ರ ಆವೃತ್ತಿಗಳಲ್ಲೂ ಇರಾನಿ ಕಪ್ ಗೆದ್ದಿತ್ತು. ಇನ್ನು ಈ ಪಂದ್ಯದಲ್ಲಿ ಗೆಲ್ಲಲು 361 ರನ್ಗಳ ಗುರಿ ಬೆನ್ನಟ್ಟಿದ ರೆಸ್ಟ್ ಆಫ್ ಇಂಡಿಯಾ ತಂಡ ಅಂತಿಮ ಇನ್ನಿಂಗ್ಸ್ನಲ್ಲಿ ಹೋರಾಟದ ಪ್ರದರ್ಶನ ನೀಡಿತ್ತಾದರೂ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿದರ್ಭ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 342 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಅಥರ್ವ ತೈಡೆ ಅದ್ಭುತ ಇನ್ನಿಂಗ್ಸ್ ಆಡಿ 15 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 143 ರನ್ ಕಲೆಹಾಕಿದರು. ಇವರೊಂದಿಗೆ ಯಶ್ ರಾಥೋಡ್ ಕೂಡ 91 ರನ್ಗಳ ಕೊಡುಗೆ ನೀಡಿದರು. ಈ ಮಧ್ಯೆ, ರೆಸ್ಟ್ ಆಫ್ ಇಂಡಿಯಾ ಪರ ಆಕಾಶ್ ದೀಪ್ ಮತ್ತು ಮಾನವ್ ಸುತಾರ್ ತಲಾ ಮೂರು ವಿಕೆಟ್ ಪಡೆದರು.
ಇದಕ್ಕೆ ಪ್ರತಿಯಾಗಿ, ರೆಸ್ಟ್ ಆಫ್ ಇಂಡಿಯಾದ ಬ್ಯಾಟಿಂಗ್ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ತಂಡವು 69.5 ಓವರ್ಗಳಲ್ಲಿ 214 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕ ರಜತ್ ಪಾಟಿದಾರ್ 66 ರನ್ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಅಭಿಮನ್ಯು ಈಶ್ವರನ್ 52 ರನ್ಗಳ ಕಾಣಿಕೆ ನೀಡಿದರು. ವಿದರ್ಭ ಪರ ಮಾರಕ ದಾಳಿ ನಡೆಸಿದ ಯಶ್ ಠಾಕೂರ್ ನಾಲ್ಕು ವಿಕೆಟ್ಗಳನ್ನು ಕಬಳಿಸಿದರೆ, ಹರ್ಷ್ ದುಬೆ ಮತ್ತು ಪಾರ್ಥ್ ರೇಖಾಡೆ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ವಿದರ್ಭ ತಂಡವು ಎರಡನೇ ಇನ್ನಿಂಗ್ಸ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿತು. ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಒಟ್ಟು 232 ರನ್ಗಳನ್ನು ಗಳಿಸಿ, ರೆಸ್ಟ್ ಆಫ್ ಇಂಡಿಯಾಗೆ ಗೆಲ್ಲಲು 361 ರನ್ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ರೆಸ್ಟ್ ಆಫ್ ಇಂಡಿಯಾ 267 ರನ್ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ 94 ರನ್ಗಳಿಂದ ಗೆದ್ದ ವಿದರ್ಭ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ವಿದರ್ಭ ಪರ ಬೌಲಿಂಗ್ನಲ್ಲಿ ಮಿಂಚಿದ ಹರ್ಷ್ ದುಬೆ ಗರಿಷ್ಠ ನಾಲ್ಕು ವಿಕೆಟ್ಗಳನ್ನು ಕಬಳಿಸಿದರೆ, ಯಶ್ ಠಾಕೂರ್ ಮತ್ತು ಆದಿತ್ಯ ಠಾಕ್ರೆ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Sun, 5 October 25