Vijay Hazare Trophy: ಸುಲಭ ತುತ್ತಾದ ಮಿಜೋರಾಂ; ನಾಕೌಟ್ ಸುತ್ತಿಗೆ ಕರ್ನಾಟಕ ಎಂಟ್ರಿ

|

Updated on: Dec 06, 2023 | 12:09 PM

Vijay Hazare Trophy 2023: ಗುಜರಾತ್​ನಲ್ಲಿ ನಡೆದ ಕರ್ನಾಟಕ ಹಾಗೂ ಮಿಜೋರಾಂ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಮಿಜೋರಾಂ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮಯಾಂಕ್ ಅಗರ್ವಾಲ್ ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

Vijay Hazare Trophy: ಸುಲಭ ತುತ್ತಾದ ಮಿಜೋರಾಂ; ನಾಕೌಟ್ ಸುತ್ತಿಗೆ ಕರ್ನಾಟಕ ಎಂಟ್ರಿ
ಕರ್ನಾಟಕ ತಂಡ
Follow us on

ಕರ್ನಾಟಕ ಹಾಗೂ ಮಿಜೋರಾಂ (mizoram vs karnataka) ನಡುವೆ ಗುಜರಾತ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಪಂದ್ಯದಲ್ಲಿ ಮಿಜೋರಾಂ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಿಜೋರಾಂ ತಂಡ ಕೌಶಿಕ್ ಹಾಗೂ ಗೌತಮ್ ದಾಳಿಗೆ ನಲುಗಿ ಕೇವಲ 37.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಕರ್ನಾಟಕ ತಂಡ 4 ವಿಕೆಟ್ ಕಳೆದುಕೊಂಡು 18ನೇ ಓವರ್​ನಲ್ಲಿಯೇ ಗೆಲುವಿನ ದಡ ಸೇರಿತು.

ನಲುಗಿದ ಮಿಜೋರಾಂ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಿಜೋರಾಂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ವಿಕಾಸ್ ಕುಮಾರ್ ಕೇವಲ 2 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವೆಂಕಟೇಶ್​ಗೆ ಬಲಿಯಾದರು. ಮತ್ತೊಬ್ಬ ಆರಂಭಿಕ ಲಾಲ್ನುನ್ಫೆಲಾ ಕೂಡ ಕೇವಲ 4 ರನ್​ಗಳಿಗೆ ಸುಸ್ತಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಅಗ್ನಿ ಚೋಪ್ರಾ 16 ರನ್​ಗಳ ಇನ್ನಿಂಗ್ಸ್ ಆಡಿದರೆ, ಜೆಹು ಆಂಡರ್ಸನ್ 1 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು.

Ranji Trophy 2022: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಕನ್ನಡಿಗ ದೇವದತ್ ಪಡಿಕ್ಕಲ್..!

4 ವಿಕೆಟ್ ಪಡೆದು ಮಿಂಚಿದ ಕೌಶಿಕ್

ಪರ್ವೇಜ್ ಅಹಮದ್​ಗೂ 5 ರನ್ ದಾಟಲು ಸಾಧ್ಯವಾಗಲಿಲ್ಲ. ಆದರೆ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋಸೆಫ್ ಲಾಲ್ತನ್ಖುಮಾ ತಂಡದ ಪರ ಹೋರಾಟದ ಇನ್ನಿಂಗ್ಸ್ ಆಡಿ 37 ರನ್​ಗಳ ಕೊಡುಗೆ ನೀಡಿದರೆ, ಕರ್ನಾಟಕ ಮೂಲದ ಕೆ ಸಿ ಕಾರಿಯಪ್ಪ ಕೆಳಕ್ರಮಾಂಕದಲ್ಲಿ 36 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದಿಂದಾಗಿ ಮಿಜೋರಾಂ ತಂಡ 100 ರನ್​ಗಳ ಗಡಿ ದಾಟಿತು. ಕರ್ನಾಟಕ ಪರ ಬೌಲಿಂಗ್​ನಲ್ಲಿ ಮಿಂಚಿದ ಕೌಶಿಕ್ 9 ಓವರ್ ಬೌಲ್ ಮಾಡಿ 5 ಮೇಡನ್ ಸೇರಿದಂತೆ 4 ವಿಕೆಟ್ ಕಬಳಿಸಿದರು. ಇವರಿಗೆ ಸಾಥ್ ನೀಡಿದ ಸ್ಪಿನ್ನರ್ ಗೌತಮ್ 3 ವಿಕೆಟ್ ಪಡೆದರೆ, ಮನೋಜ್ 2 ವಿಕೆಟ್‌ ಪಡೆದು ಮಿಂಚಿದರು.

ಮಯಾಂಕ್ ಗೆಲುವಿನ ಆಟ

ಇನ್ನು ಮಿಜೋರಾಂ ನೀಡಿದ ಅಲ್ಪ ರನ್​ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ತಂಡ ಕೇವಲ 2 ರನ್​ಗಳಿದ್ದಾಗ ಆರಂಭಿಕ ಶರತ್ ಅವರ ವಿಕೆಟ್ ಕಳೆದುಕೊಂಡಿತು. ಅಭಿನವ್ ಮನೋಹರ್ ಕೂಡ 14 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಗೌತಮ್​ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಹೀಗಾಗಿ ತಂಡ 24 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್, ನಾಯಕನ ಆಟ ಆಡಿ ಅಜೇಯ 48 ರನ್ ಸಿಡಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮಯಾಂಕ್​ಗೆ ಮನೋಜ್ ಬಾಂಡ್ಗೆ 28 ರನ್ ಹಾಗೂ ಮನೀಶ್ ಪಾಂಡೆ ಅಜೇಯ 38 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ಉತ್ತಮ ಸಾಥ್ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Wed, 6 December 23