ನಿವೃತ್ತಿಯ ಮರುದಿನವೇ ಗುರೂಜಿಯ ಭೇಟಿಯಾದ ವಿರಾಟ್ ಕೊಹ್ಲಿ

Virat Kohli-Anushka Sharma: ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಅವರು ಏಕದಿನ ಕ್ರಿಕೆಟ್​ನಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ. 14 ವರ್ಷಗಳ ದೀರ್ಘ ಟೆಸ್ಟ್ ಕ್ರಿಕೆಟ್ ‘ಇನ್ನಿಂಗ್ಸ್’ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಾವು ನಂಬುವ ಗುರೂಜಿ ಅವರ ಆಶ್ರಮಕ್ಕೆ ತೆರಳಿ ಭೇಟಿ ಮಾಡಿದ್ದಾರೆ.

ನಿವೃತ್ತಿಯ ಮರುದಿನವೇ ಗುರೂಜಿಯ ಭೇಟಿಯಾದ ವಿರಾಟ್ ಕೊಹ್ಲಿ
Virat Kohli

Updated on: May 13, 2025 | 5:28 PM

ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅತ್ಯಂತ ಸರಳವಾಗಿ ಇನ್​ಸ್ಟಾಗ್ರಾಂ ಪೋಸ್ಟ್ ಒಂದನ್ನು ಹಾಕಿ ನಿವೃತ್ತಿ ಘೋಷಣೆ ಮಾಡಿದ್ದಾರೆ. 14 ವರ್ಷಗಳ ಸುದೀರ್ಘ ಟೆಸ್ಟ್ ‘ಇನ್ನಿಂಗ್ಸ್’ಗೆ ವಿದಾಯ ಹೇಳಿದ್ದಾರೆ. ಆದರೆ ಏಕದಿನ ಪಂದ್ಯದಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ ಕೊಹ್ಲಿ. ಐಪಿಎಲ್​​ನಲ್ಲಿಯೂ ಆಟ ಮುಂದುವರೆಸಲಿದ್ದಾರೆ. ಕೊಹ್ಲಿಯ ಟೆಸ್ಟ್ ನಿವೃತ್ತಿ ಬಗ್ಗೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಮರು ದಿನವೇ ಕೊಹ್ಲಿ ತಾವು ನಂಬುವ ಗುರುಗಳನ್ನು ಭೇಟಿ ಆಗಿದ್ದಾರೆ. ಭೇಟಿಗೆ ಪತ್ನಿ ಅನುಷ್ಕಾ ಶರ್ಮಾ ಅವರನ್ನೂ ಕರೆದೊಯ್ದಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರುಗಳು ಉತ್ತರ ಪ್ರದೇಶದ ವೃಂದಾವನದ ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಭೇಟಿ ಮಾಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರುಗಳು ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಹೋಗಿ ಗುರುಗಳ ಮುಂದೆ ಮಂಡಿ ಊರಿ ಕುಳಿತಿರುವ ಚಿತ್ರ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಗುರುಗಳೊಂದಿಗೆ ಕೆಲ ಸಮಯ ಮಾತನಾಡಿದ ಬಳಿಕ ಪೂಜೆ ಮಾಡಿಸಿಕೊಂಡು ಹೊರಟಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ.

ಇದನ್ನೂ ಓದಿ:ಟೀಮ್ ಇಂಡಿಯಾ ಪರ ಕೇವಲ 27 ದಿನ ಮಾತ್ರ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

ಈ ಹಿಂದೆಯೂ ಸಹ ಕೆಲವು ಬಾರಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರುಗಳು ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಆಗಿದ್ದರು. ಅವರ ಸಲಹೆ ಮೇರೆಗೆ ಕೆಲವು ಪೂಜೆ-ಪುನಸ್ಕಾರಗಳನ್ನು ಈ ದಂಪತಿ ಮಾಡಿದ್ದರು. ಒಂದು ಸಮಯದಲ್ಲಿ ‘ನಾನು ಪೂಜೆ-ಪುನಸ್ಕಾರ ಮಾಡುವ ವ್ಯಕ್ತಿಯಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ ವಿರಾಟ್ ಕೊಹ್ಲಿ ಈಗ ಗುರೂಜಿಗಳ ಮುಂದೆ ಮಂಡಿ ಊರಿ ಕೂರುತ್ತಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ ಗಂಟೆ ಗಟ್ಟಲೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.

ಟೆಸ್ಟ್ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ವಿರಾಟ್ ಕೊಹ್ಲಿ ಇದೀಗ ಐಪಿಎಲ್​ ತಂಡವನ್ನು ಸೇರಿಕೊಳ್ಳಬೇಕಿದೆ. ಯುದ್ಧ ಪರಿಸ್ಥಿತಿಯ ಕಾರಣದಿಂದ ನಿಂತು ಹೋಗಿದ್ದ ಐಪಿಎಲ್​ಗೆ ಮತ್ತೆ ಚಾಲನೆ ದೊರೆತಿದ್ದು ಹೊಸ ವೇಳಾ ಪಟ್ಟಿ ಘೋಷಣೆ ಮಾಡಲಾಗಿದೆ. ಆರ್​ಸಿಬಿಗೆ ಲೀಗ್ ಹಂತದಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದೆ. ಪ್ರಸ್ತುತ ಅಂಕಪಟ್ಟಿಯ ಪ್ರಕಾರ ಆರ್​ಸಿಬಿ ಟೇಬಲ್ ಟಾಪರ್ಸ್ ಆಗಿದ್ದು, ಇನ್ನು ಮೂರು ಪಂದ್ಯಗಳನ್ನು ಗೆದ್ದರೆ ಟೇಬಲ್ ಟಾಪ್​ನಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಮೇ 17 ರಂದು ಆರ್​ಸಿಬಿಯ ಪಂದ್ಯ ನಡೆಯಲಿದ್ದು, ಇನ್ನೆರಡು ದಿನಗಳಲ್ಲಿ ಕೊಹ್ಲಿ ಆರ್​ಸಿಬಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.