ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ (India vs New Zealand) ಅನ್ನು ನಾಲ್ಕು ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ತಮ್ಮ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತ ಈಗ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಪಂದ್ಯ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದ ಕೆಲ ಸ್ಟಾರ್ ಆಟಗಾರರು ಕ್ಯಾಂಪ್ನಿಂದ ಹೊರಬಂದಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ಟೀಮ್ ಇಂಡಿಯಾ ಶಿಬಿರವನ್ನು ತೊರೆದಿದ್ದಾರೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಭಾರತೀಯ ಕೆಲ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಹಾಗೂ ವಿರಾಮ ಪಡೆದುಕೊಳ್ಳಲು ತ್ವರಿತ ರಜೆಗೆ ನೀಡಿದೆ.
ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 29 ರಂದು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರು 2-3 ದಿನಗಳ ವಿರಾಮ ಪಡೆದುಕೊಳ್ಳಲಿದ್ದಾರೆ. ರೋಹಿತ್ ಪಡೆಯ ಮುಂದಿನ ಪಂದ್ಯಕ್ಕೆ ಏಳು ದಿನಗಳ ಅಂತರವಿದೆ. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.
ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಆಂಗ್ಲರಿಗೆ ಬಿಗ್ ಶಾಕ್; ವಿಶ್ವಕಪ್ನಿಂದ ಹೊರಬಿದ್ದ ಸ್ಟಾರ್ ಬೌಲರ್..!
ಅಕ್ಟೋಬರ್ 26 ರಂದು ಲಕ್ನೋದಲ್ಲಿ ಎಲ್ಲ ಭಾರತೀಯ ಆಟಗಾರರು ಸೇರಲಿದ್ದಾರೆ. ಏಷ್ಯಾಕಪ್ 2023 ರಿಂದ ತಂಡದಲ್ಲಿರುವ ಅನೇಕ ಆಟಗಾರರು ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿದ್ದಾರೆ. ಏಷ್ಯಾಕಪ್, ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಂತರ ವಿಶ್ವಕಪ್ ಪ್ರಾರಂಭವಾಯಿತು. ಹೀಗಾಗಿ ಯಾವುದೇ ಆಟಗಾರರಿಗೆ ವಿರಾಮ ಸಿಗಲಿಲ್ಲ. ಇದೀಗ ಒಂದು ವಾರದ ನಡುವೆ ಮೂರು ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಇನ್ನೂ ಬೆಂಗಳೂರಿನ ಎನ್‌ಸಿಎಯಲ್ಲಿದ್ದಾರೆ, ಅವರು ನೇರವಾಗಿ ಲಕ್ನೋದಲ್ಲಿ ತಂಡ ಸೇರಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾಕ್ಕಿನ್ನು ನಾಲ್ಕು ಪಂದ್ಯಗಳು ಬಾಕಿಯಿದೆ. ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ, ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ, ನ. 5ಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಕೊನೆಯದಾಗಿ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ರಾಹುಲ್ ಸೇರಿದಂತೆ ಹಿರಿಯ ಆಟಗಾರರಿಗೆ ಈ ವಿರಾಮ ಲಾಭದಾಯಕವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ