
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ತಂಡ ಯಾವುದು? ಈ ಪ್ರಶ್ನೆಗೆ ಹೊಸ ಉತ್ತರ ವಾಷಿಂಗ್ಟನ್ ಫ್ರೀಡಂ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಬರೋಬ್ಬರಿ 267 ರನ್ಗಳನ್ನು ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.
ಒಕ್ಲಾಂಡ್ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು.
ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಾಯಕ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನಟ್ಟಿದರು. ಪರಿಣಾಮ ಕೇವಲ 31 ಎಸೆತಗಳಲ್ಲಿ ಶತಕ ಮೂಡಿಬಂತು.
ಈ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 13 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 106 ರನ್ ಚಚ್ಚಿದರು. ಈ ಸ್ಫೋಟಕ ಶತಕದ ನೆರವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು.
267 ರನ್ಗಳ ಗುರಿ ಪಡೆದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಮಿತ್ ಆ ಬಳಿಕ ಸಿಡಿಲಬ್ಬರ ಶುರು ಮಾಡಿದ್ದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರಿಸ್ ಗೌಸ್ ವಿಸ್ಫೋಟಕ ಇನಿಂಗ್ಸ್ ಆಡಿದರು. ಪರಿಣಾಮ 16 ಓವರ್ಗಳ ಮುಕ್ತಾಯದ ವೇಳೆಗೆ ವಾಷಿಂಗ್ಟನ್ ಫ್ರೀಡಂ ತಂಡದ ಸ್ಕೋರ್ 250ರ ಗಡಿದಾಟಿತು.
ಈ ಇಬ್ಬರು ದಾಂಡಿಗರ ಶರವೇಗದ ಶತಕಗಳ ನೆರವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು 18.4 ಓವರ್ಗಳಲ್ಲಿ 270 ರನ್ ಬಾರಿಸಿ 6 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಭರ್ಜರಿ ಚೇಸಿಂಗ್ನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಐಪಿಎಲ್ನಲ್ಲಿ ನಿರ್ಮಾಣವಾಗಿದ್ದ ವಿಶ್ವ ದಾಖಲೆಯ ಚೇಸಿಂಗ್ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ವಿಶ್ವ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು. ಈ ದಾಖಲೆಯನ್ನು 18.4 ಓವರ್ಗಳಲ್ಲಿ ವಾಷಿಂಗ್ಟನ್ ಫ್ರೀಡಂ ಪಡೆ ಉಡೀಸ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್ ಹೆಸರಿಸಿದ ರಾಬಿನ್ ಉತ್ತಪ್ಪ!
ಇನ್ನು ಈ ವಿಶ್ವ ದಾಖಲೆಯ ಗೆಲುವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಲೆಂಜರ್ ಸುತ್ತಿಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಸ್ಟೀವ್ ಸ್ಮಿತ್ ಪಡೆ ಫೈನಲ್ಗೇರಲಿದೆ.
Published On - 12:49 pm, Thu, 16 July 26