
2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯಕ್ಕೆ ಪಾಕಿಸ್ತಾನ್ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಈಗಾಗಲೇ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿದೆ. ಆದರೆ ಇತ್ತ ಭಾರತ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಸಹ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.
ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಈ ಹಿಂದೆ ವರದಿಯಾಗಿತ್ತು. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪುವ ಸಾಧ್ಯತೆಯಿಲ್ಲ. ಅಲ್ಲದೆ ಪಂದ್ಯಾವಳಿಯನ್ನು ಪಾಕ್ನಲ್ಲೇ ಆಯೋಜಿಸುವ ತನ್ನ ನಿಲುವಿನಲ್ಲಿ ದೃಢವಾಗಿ ನಿಂತಿದೆ. ಹೀಗಾಗಿಯೇ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಈ ಪ್ರಶ್ನೆಗೆ ಮಾತನಾಡಿರುವ ಪಾಕ್ ತಂಡದ ಆಟಗಾರ ಹಸನ್ ಅಲಿ, ನಾವು ಭಾರತದಲ್ಲಿ ಪಂದ್ಯಗಳನ್ನಾಡಲು ಹೋಗುತ್ತಿದ್ದರೆ, ಅವರು ಸಹ ಪಾಕಿಸ್ತಾನಕ್ಕೂ ಬರಬೇಕು. ಕ್ರೀಡೆ ರಾಜಕೀಯದಿಂದ ದೂರವಿರಬೇಕು ಎಂದು ಬಹಳಷ್ಟು ಮಂದಿ ಹಲವು ಬಾರಿ ಹೇಳಿದ್ದಾರೆ. ಅತ್ತ ಭಾರತೀಯ ಆಟಗಾರರು ಕೂಡ ಪಾಕಿಸ್ತಾನದಲ್ಲಿ ಆಡಲು ಬಯಸುವುದಾಗಿ ಈ ಹಿಂದೆ ಸಂದರ್ಶನಗಳಲ್ಲಿ ಹೇಳಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರಲು ಬಯಸುತ್ತಿಲ್ಲ ಎಂದೇಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತನ್ನ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಹಸನ್ ಅಲಿ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪಿಸಿಬಿ ಅಧ್ಯಕ್ಷರು ಈಗಾಗಲೇ ಹೇಳಿದಂತೆ, ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುವುದಾದರೆ, ಅದು ಪಾಕಿಸ್ತಾನದಲ್ಲೇ ನಡೆಯಲಿದೆ. ಭಾರತಕ್ಕೆ ಬರಲು ಇಷ್ಟವಿಲ್ಲದಿದ್ದರೆ ಬೇಡ. ನಾವು ಅವರಿಲ್ಲದೆ ಆಡುತ್ತೇವೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಬೇಕು ಎಂಬುದಷ್ಟೇ ನಮ್ಮ ನಿಲುವು. ಭಾರತ ತಂಡ ಭಾಗವಹಿಸಲು ಬಯಸದಿದ್ದರೆ, ಕ್ರಿಕೆಟ್ ಮುಗಿದಿದೆ ಎಂದು ಅರ್ಥವಲ್ಲ. ಭಾರತವನ್ನು ಹೊರತುಪಡಿಸಿ ಇನ್ನೂ ಅನೇಕ ತಂಡಗಳಿವೆ. ಆ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ ಎಂದು ಹಸನ್ ಅಲಿ ಹೇಳಿದ್ದಾರೆ.
ಇದೀಗ ಹಸನ್ ಅಲಿ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಅಲ್ಲದೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದರೆ ಏನಾಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ- ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?